ಕೋಳಿ ಅಂಕಕ್ಕೆ ಪೊಲೀಸ್ ದಾಳಿ
ಸುಬ್ರಹ್ಮಣ್ಯ: ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿ ಕೊಂಡ ಘಟನೆ ಕಡಬ ತಾಲೂಕಿನ ಯೇನೆಕಲ್ಲಿನಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ಸಂಜೆ ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಸಂಕಡ್ಕ ಎಂಬಲ್ಲಿರುವ ಜಯರಾಮ ಎಂಬವರ ತೋಟದಲ್ಲಿ ಹಣವನ್ನು ಪಣವಾಗಿಟ್ಟು ಹುಂಜ ಕೋಳಿಗಳನ್ನು ಕಟ್ಟಿಜೂಜಾಟ ಆಡುತ್ತಿರುವ ಬಗ್ಗೆ ಸುಬ್ರಹ್ಮಣ್ಯ ಎಸೈ ಆಂಜನೇಯ ರೆಡ್ಡಿ ಜಿ.ವಿ. ಅವರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಅದರಂತೆ ಅವರು ಠಾಣಾ ಸಿಬ್ಬಂದಿಗಳೊಂದಿಗೆ, ಘಟನಾ ಸ್ಥಳಕ್ಕೆ ದಾಳಿ ಮಾಡಿದಾಗ, ಕೃತ್ಯದಲ್ಲಿ ಭಾಗಿಯಾಗಿದ್ದವರು ಪರಾರಿಯಾಗಿದ್ದು, ಸ್ಥಳವನ್ನು ಪರಿಶೀಲಿಸಿದಾಗ, ಕೋಳಿಗಳನ್ನು ಕಟ್ಟಿಜೂಜಾಟ ಆಡಿರುವ ಕುರುಹು ಕಂಡುಬಂದಿರುತ್ತದೆ ಹಾಗೂ 2 ಕೋಳಿಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ಕೋಳಿಯ ಕಾಲಿಗೆ ಕೋಳಿ ಅಂಕಕ್ಕೆ ಬಳಸುವ ಕತ್ತಿ ಕಟ್ಟಿರುವುದು ಕಂಡುಬಂದಿದೆ. ಆ ಹುಂಜಕೋಳಿ ಜೂಜಾಟವನ್ನು ಯೇನೆಕಲ್ಲು ಗ್ರಾಮದ ನಿವಾಸಿಯಾದ ಪುರಂದರ ಎಂಬವರು ಹಾಗೂ ಇತರರು ಆಡಿರುವುದು ತಿಳಿದುಬಂದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.