ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಮಾನಸಿಕ ಹಿಂಸೆ, ತಾರತಮ್ಯ ಆರೋಪ: ಡಿಜಿ-ಐಜಿಪಿಗೆ ಪತ್ರ ಬರೆದ ಎಸ್ಪಿ ಎಸ್.ಎಸ್.ಕಾಶಿ

ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಮಾನಸಿಕ ಹಿಂಸೆ, ತಾರತಮ್ಯ ಆರೋಪ: ಡಿಜಿ-ಐಜಿಪಿಗೆ ಪತ್ರ ಬರೆದ ಎಸ್ಪಿ ಎಸ್.ಎಸ್.ಕಾಶಿ

ಬೆಂಗಳೂರು: ಮಾನಸಿಕ ಹಿಂಸೆ, ತಾರತಮ್ಯ ಮಾಡುತ್ತಿರುವ ಆರೋಪದ ಮೇಲೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಎಸ್ಪಿ ಎಸ್.ಎಸ್.ಕಾಶಿ ಅವರು ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ, ದರ್ಪ ತೋರುತ್ತಿದ್ದಾರೆ ಎಂದು ಕೆಲವು ಗಂಭೀರ ಆರೋಪಗಳನ್ನು ಮಾಡಿ ಎಸ್ಪಿ ಎಸ್.ಎಸ್.ಕಾಶಿ ದೂರಿನಲ್ಲಿ ತಿಳಿಸಿದ್ದಾರೆ.

ನನಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಿದರೆ, ಸುಧೀರ್ ಕುಮಾರ್ ರೆಡ್ಡಿಯ ಎಲ್ಲ ಕರ್ಮಕಾಂಡಗಳನ್ನು ನಿಮ್ಮ ಮುಂದೆ ಸಂಪೂರ್ಣ ಬಯಲು ಮಾಡುತ್ತೇನೆ. ಇಲಾಖೆಯಲ್ಲಿ ಅಧೀನ ಅಧಿಕಾರಿಗಳು ಅವರ ಮಾತಿನಂತೆ ಕೆಲಸ ಮಾಡದಿದ್ದರೆ ಬ್ಯಾಕ್ ಟು ಬ್ಯಾಕ್ ಮೆಮೊ ನೀಡುವುದರ ಮೂಲಕ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದಲ್ಲದೆ ಕನ್ನಡಿಗ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದು ಎಸ್.ಎಸ್.ಕಾಶಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಹಲವು ಬಾರಿ ಲಿಖಿತ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ರಾಜ್ಯದಲ್ಲಿ ಕೆಲವು ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿ ಕೆಳಹಂತದ ಸಿಬ್ಬಂದಿ ಮೇಲೆ ದರ್ಪ, ತಾರತಮ್ಯ ಹಾಗೂ ಸ್ವಜನಪಕ್ಷಪಾತ ತೋರಿಸುತ್ತಿದ್ದಾರೆ. ವಿಶೇಷವಾಗಿ ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲ ಅಧಿಕಾರಿಗಳು ಕನ್ನಡಿಗ ಅಧಿಕಾರಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್.ಎಸ್.ಕಾಶಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧದ ಆರೋಪಗಳು, ಅಧೀನ ಸಿಬ್ಬಂದಿಗೆ ನೀಡಿದ ಕಿರುಕುಳ ಹಾಗೂ ಇತರೇ ದೌರ್ಜನ್ಯಗಳ ಕುರಿತಾಗಿ ವಿವರವಾಗಿ ಹೇಳಲು ಒಂದು ವಾರದೊಳಗೆ ಭೇಟಿಗೆ ಅವಕಾಶ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಎಸ್ಪಿ ಎಸ್.ಎಸ್.ಕಾಶಿ ಮನವಿ ಮಾಡಿದ್ದಾರೆ.

ಒಟ್ಟಾರೆ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಶಿಸ್ತಿನ ಇಲಾಖೆ ಎನಿಸಿಕೊಂಡಿರುವ ಪೊಲೀಸ್ ಇಲಾಖೆಯಲ್ಲಿ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಈ ಶೀತಲ ಸಮರ ಬೆಳಕಿಗೆ ಬಂದಿರುವುದು ಸರಕಾರದ ಮುಜುಗರಕ್ಕೂ ಕಾರಣವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article