ರೈಲಿನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಗೃಹಿಣಿ!
ಮೈಸೂರಿನ ಸವಣೂರು ನಿವಾಸಿ ಪೊನ್ನಮ್ಮ ಎಂಬವರೇ ಗಂಡು ಮಗುವಿಗೆ ಜನ್ಮ ನೀಡಿದವರಾಗಿದ್ದಾರೆ. ಮಂಗಳೂರು ರೈಲು ನಿಲ್ದಾಣದಲ್ಲಿ ತನ್ನ ಊರಿಗೆ ತೆರಳಲೆಂದು ರೈಲು ಹತ್ತಿದ್ದ ಇವರಿಗೆ ರೈಲಿ ಮುಂದಕ್ಕೆ ಬರುತ್ತಿದ್ದಂತೆ ಹೆರಿಗೆಯ ನೋವು ಕಾಣಿಸಿಕೊಂಡಿತ್ತು, ಈ ಸಂದರ್ಭ ಪಕ್ಕದಲ್ಲಿ ಕುಳಿತಿದ್ದ ಮುಸ್ಲಿಂ ಮಹಿಳೆಯರು ಉಪಚರಿಸಿದ್ದಲ್ಲದೆ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಇಲಾಖೆ ತಕ್ಷಣ ಸ್ಪಂದಿಸಿ ಬಿ.ಸಿ.ರೋಡು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಡಲಾಯಿತು, ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿ ಹೆಚ್ಚಿನ ಆರೈಕೆಗಾಗಿ ಅಂಬ್ಯಲೆನ್ಸ್ ಮೂಲಕ ತಾಯಿ- ಮಗುವನ್ನು ವೈದ್ಯರ ತಂಡ ತಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಲ್ಲದೆ,ಬಳಿಕ ಹೆಚ್ಚಿನ ಚಿಕಿತ್ಸೆಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗು-ತಾಯಿ ಆರೋಗ್ಯವಾಗಿದ್ದರೂ ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ರಾತ್ರಿ ಸುಮಾರು 7.20 ರ ಹೊತ್ತಿಗೆ ಈ ರೈಲು ಬಿಸಿ.ರೋಡಿನ ರೈಲ್ವೇ ನಿಲ್ದಾಣ ತಲುಪಿತ್ತು. ಸುಮಾರು ಒಂದು ತಾಸುಗಳ ಕಾಲ ರೈಲು ಇಲ್ಲೇ ನಿಲುಗಡೆಯಾಗಿದ್ದು,ಗೃಹಿಣಿಯ ಹೆರಿಗೆ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 8.20 ಕ್ಕೆ ಬಿ.ಸಿ.ರೋಡಿನಿಂದ ರಯುಲು ಬೆಂಗಳೂರಿನತ್ತ ಸಾಗಿತು.
ಸಮಯಕ್ಕೆ ಸರಿಯಾಗಿ ಬಂದ ವೈದ್ಯಕೀಯ ತಂಡ:
ಬಸುರಿ ಮಹಿಳೆಯ ಹೆರಿಗೆಗಾಗಿ ರೈಲು ನಿಲ್ದಾಣಕ್ಕೆ ವೈದ್ಯರ ತಂಡವನ್ನು ಕರೆದುಕೊಂಡು ಬರುವಂತೆ ಕಲ್ಲಡ್ಕದ ಸುಜ್ಞಾನ ಅಂಬ್ಯುಲೆನ್ಸ್ ವಾಹನದ ಚಾಲಕ ಲೋಕೇಶ್ ಅವರಿಗೆ ಕರೆ ಬಂದ ತಕ್ಷಣ ಕೇವಲ ಮೂರು ನಿಮಿಷದಲ್ಲಿ ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿಕೊಂಡು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.
ವೈದ್ಯರು ಮಹಿಳೆಯನ್ನು ಹೆರಿಗೆ ಮಾಡಿಸಿದ ಕೂಡಲೇ ತಾಯಿ, ಮಗುವನ್ನು ಸೋಮಯಾಜಿ ಆಸ್ಪತ್ರೆಗೆ ಅದೇ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.ಕೈಕಂಬದ ಸಮಾದ್, ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಸಾರ್ವಜನಿಕರು ಸಹಕರಿಸಿದರು.
ಸುದ್ದಿ ತಿಳಿದ ಮಂಗಳೂರು ರೈಲ್ವೆ ಪೊಲೀಸರು ತಂಡ ಕೂಡ ಆಗಮಿಸಿ ಮಾಹಿತಿಯನ್ನು ಪಡೆದುಕೊಂಡರು.