ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ: 10.61 ಕೋಟಿ ರೂಪಾಯಿ ನಿವ್ವಳ ಲಾಭ
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ 2025-26ನೇ ಸಾಲಿನಲ್ಲಿ ರೂ.1,270 ಕೋಟಿ ವ್ಯವಹಾರ ನಡೆಸಿ ಅಂದಾಜು 10.61 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದರು.
ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಾಲಿನಲ್ಲಿ 1,174 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೆ ಈ ಸಾಲಿನಲ್ಲಿ ಶೇ.8.18ರಷ್ಟು ಅಭಿವೃದ್ಧಿ ದಾಖಲಿಸಿದೆ. 2025-26ನೇ ಸಾಲಿನಲ್ಲಿ ಹಾಲು ಶೇಖರಣೆ ಸರಾಸರಿ ದಿನವಹಿ 4.07 ಲಕ್ಷ ಲೀಟರ್ ಇದ್ದು, ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಶೇ.19 ರಷ್ಟು ಪ್ರಗತಿ ಕಂಡಿದೆ ಎಂದರು.
51,693 ಸಕ್ರಿಯ ಸದಸ್ಯರನ್ನು ಹೊಂದಿರುವ ಒಕ್ಕೂಟದ ಕಳೆದ ಸಾಲಿನ ನಿವ್ವಳ ಲಾಭ 12.79 ಕೋಟಿ ರೂ. ಆಗಿತ್ತು. ಹೈನುಗಾರರು ಸರಬರಾಜು ಮಾಡಿದ ಹಾಲಿಗೆ ಅನುಗುಣವಾಗಿ ಲೀಟರ್ ಗೆ 1.50 ರೂ. ಪ್ರೋತ್ಸಾಹಧನ ರೂಪದಲ್ಲಿ ನೀಡಲಾಗುತ್ತಿದೆ. ಫೆ. 21 ರಿಂದ ಮೇ. 31ರವರೆಗೆ ವಿಶೇಷ ಪ್ರೋತ್ಸಾಹಧನವಾಗಿ ಒಂದು ರೂ.ವನ್ನು ಸೇರಿಸಿ ಒಟ್ಟು 2.50 ರೂ.ನಂತೆ ಸದರಿ ಸಾಲಿನಲ್ಲಿ ಒಟ್ಟು 23.99 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಲಾಗಿದೆ. ಹೈನುಗಾರಿಕೆಗೆ ಪೂರಕವಾಗಿ ಮಿನಿ ಡೇರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಘಟಕ ಯೋಜನೆ, ಹಸಿರು ತಾಕು ಸ್ಥಾಪನೆ, ಹೊರ ರಾಜ್ಯದಿಂದ ರಾಸು ಖರೀದಿ, ಕರು ಸಾಕಾಣಿಕಾ ಯೋಜನೆಗಾಗಿ ಅನುದಾನಗಳ ರೂಪದಲ್ಲಿ ರೂ.6.64 ಕೋಟಿ ನೀಡಲಾಗಿದೆ. ಕಡಸು ಅಭಿವೃದ್ಧಿ ಯೋಜನೆಗಾಗಿ 60 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ರವಿರಾಜ್ ಹೆಗ್ಡೆ ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ 1,781 ಸಕ್ರಿಯ ಡೀಲರ್‌ಗಳು, 42 ಪಾರ್ಲರ್, 91 ಫ್ರಾಂಚೈಸಿ, 15 ಟಿಸಿಡಿಗಳ ಮುಖಾಂತರ 2025-26ರ ಸಾಲಿನಲ್ಲಿ ದಿನವಹಿ ಸರಾಸರಿ 3,87,360 ಲೀಟರ್ ಹಾಲು, 81,979 ಕೆ.ಜಿ. ಮೊಸರು, 2.8 ಟನ್ ಪನೀರ್, 6.1 ಟನ್ ತುಪ್ಪ, 850 ಕೆ.ಜಿ ವಿವಿಧ ಸಿಹಿ ಉತ್ಪನ್ನ, 2,000 ಲೀ.ಸುವಾಸಿತ ಹಾಲು, 5,043 ಲೀಟರ್ ಮಜ್ಜಿಗೆ ಮತ್ತು 4,250 ಲೀಟರ್ ಲಸ್ಸಿ ಮಾರಾಟ ಮಾಡಿ ದಿನವಹಿ ರೂ.3.03 ಕೋಟಿ ಮಾರಾಟ ವ್ಯವಹಾರ ಆಗುತ್ತಿದೆ ಎಂದರು.
ಒಕ್ಕೂಟದಲ್ಲಿ ನವೀನ ತಂತ್ರಜ್ಞಾನದ ಯಂತ್ರೋಪಕರಣಗಳನ್ನು, ನೂತನ ಗೋಡೌನ್, ಐಸ್ ಕ್ರೀಂ ಕೋಲ್ಡ್ ಸ್ಟೋರೇಜ್, ಮತ್ತು ನವೀಕರಿಸಿದ ರೆಫ್ರಿಜರೇಶನ್ ಘಟಕನ್ನು 12.81 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿ ಬಳಸಲಾಗುತ್ತಿದೆ. ಮಂಗಳೂರು ಕೇಂದ್ರ ಕಚೇರಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನೂತನ ಗೋಡೌನ್ ಮತ್ತು ಉಡುಪಿ ಡೇರಿಯಲ್ಲಿ 4.25 ಕೋಟಿ ರೂ.ವೆಚ್ಚದಲ್ಲಿ ಆಡಳಿತ ಕಛೇರಿ ನಿರ್ಮಾಣ ಪ್ರಗತಿ ಹಂತದಲ್ಲಿದ್ದು, ಈ ಸಾಲಿನಲ್ಲಿ ಉದ್ಘಾಟನೆಗೊಳ್ಳಲಿದೆ. ಮುಂದಕ್ಕೆ ಮೆಗಾ ಡೇರಿ, ಐಸ್ ಕ್ರೀಂ ಪ್ಲಾಂಟ್, ಪನೀರ್ ಘಟಕ, ನೀರು ಬಾಟ್ಲಿಂಗ್ ಘಟಕಗಳ ಸ್ಥಾಪನೆಗೆ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ ಎಂದು ರವಿರಾಜ್ ಹೆಗ್ಡೆ ಮಾಹಿತಿ ನೀಡಿದರು.
ನಿರ್ದೇಶಕರಾದ ಸುಚರಿತ ಶೆಟ್ಟಿ, ಚಂದ್ರಶೇಖರ್ ಮಾಡ್ನೂರು, ಮಮತಾ ಶೆಟ್ಟಿ, ಶೇಖರಣೆ ಮತ್ತು ತಾಂತ್ರಿಕ ವಿಭಾಗ ಮುಖ್ಯಸ್ಥ ರವಿರಾಜ್ ಉಡುಪ, ವ್ಯವಸ್ಥಾಪಕ ವಿವೇಕ್ ಸುದ್ದಿಗೋಷ್ಠಿಯಲ್ಲಿದ್ದರು.