ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಸಾಧನೆಯ ಮೈಲಿಗಲ್ಲು: ರೂ.108 ಕೋಟಿ ಠೇವಣಿ , ರೂ.1.09 ಕೋಟಿ ಲಾಭ

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಸಾಧನೆಯ ಮೈಲಿಗಲ್ಲು: ರೂ.108 ಕೋಟಿ ಠೇವಣಿ , ರೂ.1.09 ಕೋಟಿ ಲಾಭ


ಮಂಗಳೂರು: ಸಹಕಾರ ರಂಗದ ಅಗ್ರಗಣ್ಯ ನಾಯಕರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಸೂಕ್ತ ಮಾರ್ಗದರ್ಶನದಲ್ಲಿ ಅಭಿವೃದ್ಧಿಯ ಪಥದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿ, 2025-26ನೇ ಆರ್ಥಿಕ ವರ್ಷದಲ್ಲಿ ರೂ.1.09 ಕೋಟಿ ಲಾಭಗಳಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷರಾದ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ನೌಕರರು ತಮ್ಮ ಆರ್ಥಿಕ ಬಲವರ್ಧನೆಗಾಗಿ ಸ್ಥಾಪಿಸಿದ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರಿ ಸಂಘವು ಇದೀಗ 95 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆರಂಭಿಕ

71 ವರ್ಷಗಳ ಕಾಲ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ್ದ  ಸಂಘವು 2001ರವರೆಗೆ ಕೇವಲ ₹3.84 ಲಕ್ಷ ಠೇವಣಿ ಹಾಗೂ ₹3.13 ಲಕ್ಷ  ಮುಂಗಡದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಕಳೆದ 25 ವರ್ಷಗಳಲ್ಲಿ ಸಂಘವು ಅದ್ಭುತ ಬೆಳವಣಿಗೆಯನ್ನು ಕಂಡು, ಇಂದು ಸಹಕಾರಿ ನೌಕರರ ಆರ್ಥಿಕ ಶಕ್ತಿಯಾಗಿ ರೂಪಾಂತರಗೊಂಡಿದೆ.

ರೂ.100 ಕೋಟಿ ದಾಟಿದ ಠೇವಣಿ:

ಏಪ್ರಿಲ್ -25ರಂದು ನಡೆದ ಸಂಘದ ಸಭೆಯಲ್ಲಿ ಪ್ರಕಟಿಸಿದ ಆರ್ಥಿಕ ತಖ್ತೆಯ ಪ್ರಕಾರ , 2024-25ರ ಆರ್ಥಿಕ  ವರ್ಷದಲ್ಲಿ ರೂ.94.33 ಕೋಟಿ ಠೇವಣಿ ಹೊಂದಿದ್ದ ಸಂಘವು 2025-26ರ ಆರ್ಥಿಕ ವರ್ಷದಲ್ಲಿ ರೂ. 100 ಕೋಟಿಗಳ ಮೈಲಿಗಲ್ಲನ್ನು ದಾಟಿ ರೂ.108.10 ಕೋಟಿ ಠೇವಣಿಯನ್ನು ಹೊಂದಿದೆ.ಇದು ಸಂಘದ 95 ವರ್ಷಗಳ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಾಧನೆ.‌ ಠೇವಣಿ ಸಂಗ್ರಹಣೆಯ ಜೊತೆಗೆ ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು ರೂ.82.91 ಕೋಟಿಯಿಂದ ವರದಿ ವರ್ಷದಲ್ಲಿ ರೂ.91.91 ಕೋಟಿಗೆ ಏರಿಕೆಯಾಗಿದೆ. ಹಾಗೆಯೇ ಸಂಘದ ಒಟ್ಟು  ವ್ಯವಹಾರವೂ ಕೂಡಾ ವರದಿ ವರ್ಷದಲ್ಲಿದ್ದ ರೂ.177.23 ಕೋಟಿಯಿಂದ ಇದೀಗ ರೂ.200.01 ಕೋಟಿಗೆ ವೃದ್ಧಿಯಾಗಿದೆ. ಇದು ಸಂಘದ ಸ್ಥಿರತೆ ಮತ್ತು ಸದಸ್ಯರ ವಿಶ್ವಾಸವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದರು.

ಸಂಘವು ಪ್ರಸ್ತುತ 1140 'ಎ' ತರಗತಿ ಸದಸ್ಯರನ್ನು ಹೊಂದಿದ್ದು, ಅವರ ಬೆಂಬಲವೇ ಸಂಘದ ಪ್ರಗತಿಯ ಮೂಲವಾಗಿದೆ.ಸಂಘವು 2024-25ನೇ ಸಾಲಿನಲ್ಲಿ ರೂ.95.32 ಲಕ್ಷ ಲಾಭ ಗಳಿಸಿತ್ತು.‌ಇದೀಗ 2025-26ನೇ ಸಾಲಿನಲ್ಲಿ ರೂ.108.10ಕೋಟಿ ಲಾಭ ಗಳಿಸಿ ಸಾಧನೆಯ ಪಥವನ್ನು ಕಂಡಿದೆ.ಸಂಘವು 29.12 ಲಕ್ಷ  ಪಾಲು ಬಂಡವಾಳವನ್ನು ಹೊಂದಿದ್ದು, ರೂ. 6.31 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಸಂಘಕ್ಕೆ ಸಹಕಾರಿ ನೌಕರ ಸದಸ್ಯರೇ ಜೀವಾಳ ಆಗಿದ್ದು, ಸಂಘದ ವ್ಯವಹಾರ ಅಭಿವೃದ್ಧಿಯಲ್ಲಿ ಸದಸ್ಯರೆಲ್ಲರ ಬೆಂಬಲ, ಪ್ರೋತ್ಸಾಹ , ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರೆಲ್ಲರ ಸಂಘಟಿತ ಕಾರ್ಯ ನಿರ್ವಹಣೆಯಿಂದ ಸಂಘವು  ಅಭಿವೃದ್ಧಿಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.

ಸಂಘವು ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಮೂರು ಮಹಡಿಯ ಸುಸಜ್ಜಿತ 'ಉನ್ನತಿ ' ಸ್ವಂತ ಆಡಳಿತ ಕಟ್ಟಡವನ್ನು ಹೊಂದಿದೆ‌ .‌ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಘವು ಈಗಾಗಲೇ ನಾಲ್ಕು ಶಾಖೆಗಳನ್ನು ಹೊಂದಿದ್ದು , ಈ ಪೈಕಿ ಮಂಗಳೂರುನಲ್ಲಿ ಎರಡು , ಉಡುಪಿ ಹಾಗೂ ಪುತ್ತೂರುನಲ್ಲಿ ತಲಾ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಪ್ರಗತಿಯನ್ನು ಗುರುತಿಸಿ ಎಸ್‌ಸಿಡಿಸಿಸಿ  ಬ್ಯಾಂಕ್  ನೀಡುವ ಪ್ರತಿಷ್ಠಿತ ಸಾಧನಾ ಪ್ರಶಸ್ತಿಯನ್ನು ಸಂಘವು ಸತತ 8 ಬಾರಿ (2017-18 ರಿಂದ 2024-25) ಪಡೆದುಕೊಂಡಿದೆ ಇದು ಸಂಘದ ಸ್ಥಿರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

ಸಂಘದ ಸಭೆಯಲ್ಲಿ ಉಪಾಧ್ಯಕ್ಷರಾದ  ರಾಘವ ಆರ್ ಉಚ್ಚಿಲ್, ನಿರ್ದೇಶಕರುಗಳಾದ  ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್, ಜಯಪ್ರಕಾಶ್ ರೈ ಸಿ, ಗಿರಿಧರ್ ಕೆ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಚಂದ್ರಕಲಾ ಕೆ., ಮೋಹನ್ ಎನ್,  ವಿಶ್ವನಾಥ್ ಎನ್. ಅಮೀನ್, ಗೀತಾಕ್ಷಿ, ಕಿರಣ್ ಕುಮಾರ್ ಶೆಟ್ಟಿ, ನಿಶಿತಾ ಜಯರಾಮ್,  ಪ್ರೇಮ್ ರಾಜ್ ಭಂಡಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article