ರೌಡಿ ಶೀಟರ್ ಆರೀಫ್ ಹತ್ಯೆ ಪ್ರಕರಣ: 15 ಮಂದಿ ಭಾಗಿ: ಕಮಿಷನರ್ ಸ್ಪಷ್ಟನೆ
ಮಂಗಳೂರು: ಮೀನಿನ ವ್ಯಾಪಾರಿ, ರೌಡಿ ಶೀಟರ್ ಆರೀಫ್ (46) ಹತ್ಯೆ ಪ್ರಕರಣದ ಆರೋಪಿಗಳ ತನಿಖೆ ಸಂದರ್ಭ ಪ್ರಕರಣದಲ್ಲಿ ಒಟ್ಟು 15 ಆರೋಪಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ಈ ಪೈಕಿ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ಮತ್ತು ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡಿದ್ದು, ಇದೀಗ ನ್ಯಾಯಾಂಗ ಬಂಧನಕ್ಕೆ ಮರು ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ತನಿಖೆಯಲ್ಲಿ ವೇಳೆ ಐವರು ಆರೋಪಿಗಳ ಪಾತ್ರವೂ ಬೆಳಕಿಗೆ ಬಂದಿದೆ. ಈ ಪೈಕಿ ಕೆಲವರು ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರನ್ನು ಬಂಧಿಸುವ ನಿಟ್ಟಿನಲ್ಲಿ ಕಾನೂನು ಕ್ರಮಗಳು ಕೈಗೊಳ್ಳಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ-ಕೋಕಾ ಜಾರಿಗೊಳಿಲಾಗಿದ್ದು, ಇದು ಎಲ್ಲ ಆರೋಪಿಗಳೂ ಅನ್ವಯವಾಗಲಿದೆ. ಇದಕ್ಕೆ ಸಂಬಂಧಿಸಿದ ಆದೇಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅನಂತರ, ವಿಚಾರಣೆಗೆ ಪ್ರಕರಣವನ್ನು ಮೈಸೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ.
ಕೆ-ಕೋಕಾ ಅಡಿಯಲ್ಲಿ ಸಂಘಟಿತ ಅಪರಾಧ ಸಂಘಟನೆಯ ಪಾಲುದಾರರು ಅಥವಾ ಅದರೊಂದಿಗೆ ಗುರುತಿಸಿಕೊಳ್ಳುವುದು ಕೂಡಾ ಅಪರಾಧವಾಗಿದ್ದು, ಅದಕ್ಕೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹತ್ಯೆಯಲ್ಲಿ ಪ್ರತಿ ಆರೋಪಿಗಳ ಪಾತ್ರಕ್ಕೆ ಗಂಭೀರತೆಗೆ ಸೆಕ್ಷನ್ ಗಳನ್ನು ಹಾಕಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.