ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ: ಮುನೀರ್ ಕಾಟಿಪಳ್ಳ ಪ್ರಶ್ನೆ
ಅವರು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ರದ್ದುಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಐಎಂ) ನೇತೃತ್ವದಲ್ಲಿ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆಸಿದ ಬೃಹತ್ ಸಾಮೂಹಿಕ ಧರಣಿ ಸತ್ಯಾಗ್ರಹ ದಲ್ಲಿ ಅತಿಥಿಯಾಗಿ ಭಾಗವಹಿಸಿ
ಪ್ರತಿಭಟನೆಯಲ್ಲಿ ಮಾತನಾಡಿದರು. ಮೂಡುಬಿದಿರೆ ತಾಲೂಕು ಎಂದು ಘೋಷಣೆಯಾಗಿ ಐದು ವರ್ಷಗಳೇ ಕಳೆದಿದ್ದರೂ, ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕೊರತೆ ಎದ್ದು ಕಾಣುತ್ತಿದೆ. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗಬೇಕಾದರೆ ಆರೋಗ್ಯ ಸೇವೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಗಮನಹರಿಸಿ ತಾಲೂಕು ಮಟ್ಟದ ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆಯ ಜವಾಬ್ದಾರಿ ಕೊಡುವುದನ್ನು ನಿಲ್ಲಿಸಬೇಕು ಎಂದರು.
ಸ್ಥಳೀಯರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ತಾಲೂಕಿನಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಒತ್ತಿ ಹೇಳಿದರು.
ಸಿಪಿಐ(ಎಂ) ಮುಖಂಡ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದಿರೆ ತಾಲೂಕಾಗಿದ್ದರೂ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳೇ ದೊರೆಯುತ್ತಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಮುಂದಿನ ಬಜೆಟ್‌ನಲ್ಲಿ ಸಂಪೂರ್ಣ ಸೌಲಭ್ಯಗಳೊಂದಿಗೆ ಸರ್ಕಾರಿ ಆಸ್ಪತ್ರೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಸದಸ್ಯೆ ರಾಧಾ ಹಾಗೂ ಸಮಿತಿ ಸದಸ್ಯರಾದ ಗಿರಿಜಾ, ಶಂಕರ, ಲಕ್ಷ್ಮೀ, ಆದಿವಾಸಿ ಬುಡಕಟ್ಟು ಸಮುದಾಯದ ಅಧ್ಯಕ್ಷ ಕರಿಯ, ಮುಖಂಡ ಕೃಷ್ಣಪ್ಪ ಕೊಣಾಜೆ, ವಿವಿಧ ವಿಭಾಗಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಹಳೆ ಪೊಲೀಸ್ ಠಾಣಾ ಬಳಿಯಿಂದ ಮಿನಿ ವಿಧಾನ ಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.