ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸುವಂತೆ, ಕೆಪಿಎಸ್‌ಸಿ ಪ್ರಾದೇಶಿಕ ಕಚೇರಿ ಮಂಗಳೂರಿನಲ್ಲಿ ಸ್ಥಾಪಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ
ಸದರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಿ, ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯುವುದರ ಜೊತೆಗೆ ಸರ್ಕಾರದ ಇಲಾಖೆಗಳ ಕಾರ್ಯಕ್ಷಮತೆ ಹೆಚ್ಚಳವಾಗುತ್ತದೆ. ಕರ್ನಾಟಕ ಕರಾವಳಿಯ ಭಾಗವಾದ ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಾವಂತ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸರ್ಕಾರಿ ಉದ್ಯೋಗದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದಾರೆ. ಆದಾಗಿಯೂ, ಕರ್ನಾಟಕ ಲೋಕಸೇವಾ ಆಯೋಗದ ಎಲ್ಲಾ ಪ್ರಮುಖ ಕಾರ್ಯಗಳು ಬೆಂಗಳೂರು ಕೇಂದ್ರಿತವಾಗಿರುವುದರಿಂದ, ಕರಾವಳಿ ಭಾಗದ ಅಭ್ಯರ್ಥಿಗಳಿಗೆ ಪ್ರಯಾಣ ಹಾಗೂ ಇತರ ಸೌಲಭ್ಯಗಳಲ್ಲಿ ಅನಾನುಕೂಲ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವುದರಿಂದ ಕರಾವಳಿ ಭಾಗದ ಯುವಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಎರಡೂ ಕ್ರಮಗಳು ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಮೇಲ್ಕಂಡ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2025ರಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ನೇಮಕಾತಿಯ ವಿವರವನ್ನು ಒದಗಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಕೇಳಿದಾಗ, ರಾಜ್ಯದ 43 ವಿವಿಧ ಇಲಾಖೆಗಳಲ್ಲಿ ಸುಮಾರು 2,84,881 ಹುದ್ದೆಗಳು ಖಾಲಿ ಇರುವುದಾಗಿ ತಿಳಿದು ಬಂದಿತ್ತು. ಸದರಿ ಹುದ್ದೆಗಳನ್ನು ಭರ್ತಿ ಗೊಳಿಸುವಂತೆ ಶಾಸಕರು ಮುಖ್ಯ ಕಾರ್ಯದರ್ಶಿಯವರಿಗೆ ಮನವಿಯನ್ನು ನೀಡಿದ್ದರು. ರಾಜ್ಯ ಸರ್ಕಾರವು 2026-27ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಸುಮಾರು 56,432 ಖಾಲಿ ಹುದ್ದೆಗಳನ್ನು ಪ್ರಸ್ತುತ ವರ್ಷ ಭರ್ತಿಗೊಳಿಸುವುದಾಗಿ ಘೋಷಿಸಿತ್ತು.