ಬಿಸಿಲಿನ ಪ್ರಖರತೆ ಹೆಚ್ಚಾಗಿ ತಾಪಮಾನ ಏರಿಕೆ
ಮಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣ ಮತ್ತಷ್ಟು ಬಿಸಿಯಾಗುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಏರಿಕೆಯಾಗುತ್ತಿದ್ದು, ಬುಧವಾರ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬಂದಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ದ.ಕ ಹಾಗೂ ಉಡುಪಿ ಸರಾಸರಿ ಗರಿಷ್ಠ ತಾಪಮಾನ 36.5 ಡಿ.ಸೆಲ್ಸಿಯೆಸ್ ದಾಖಲಾಗಿರುವುದಾಗಿ ತಿಳಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಾದ ಮಂಗಳೂರು ಗರಿಷ್ಠ 37 ಡಿ.ಸೆಲ್ಸಿಯಸ್, ಕನಿಷ್ಠ 25 ಡಿ.ಸೆಲ್ಸಿಯಸ್, ಪುತ್ತೂರು ಗರಿಷ್ಠ 36ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಬೆಳ್ತಂಗಡಿಯಲ್ಲಿ ಗರಿಷ್ಠ 35.4ಡಿ.ಸೆಲ್ಸಿಯಸ್, ಕನಿಷ್ಠ 24.7ಡಿ.ಸೆಲ್ಸಿಯಸ್, ಸುಳ್ಯ ಗರಿಷ್ಠ 37.1ಡಿ.ಸೆಲ್ಸಿಯಸ್, ಕನಿಷ್ಠ 24.2ಡಿ.ಸೆಲ್ಸಿಯಸ್, ಬಂಟ್ವಾಳದಲ್ಲಿ ಗರಿಷ್ಠ 36.4ಡಿ.ಸೆಲ್ಸಿಯಸ್, ಕನಿಷ್ಠ 25.1ಡಿ.ಸೆಲ್ಸಿಯಸ್, ಮೂಡುಬಿದ್ರೆ ಗರಿಷ್ಠ 35.9ಡಿ.ಸೆಲ್ಸಿಯಸ್, ಕನಿಷ್ಠ 24.7ಡಿ.ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಹೆಚ್ಚು ಬಿಸಿಯ ಅನುಭವ:
ಈಗಿನಂತೆ ಮುಂದಿನ 3 ದಿವಸಗಳ ಕಾಲ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಹೆಚ್ಚಿನ ಆರ್ದ್ರತೆಯ ಕಾರಣದಿಂದ ಕರಾವಳಿಯ ಹಲವು ಪ್ರದೇಶಗಳಲ್ಲಿ ತಾಪಮಾನಕ್ಕಿಂತಲೂ ಹೆಚ್ಚು ಬಿಸಿಯ ಅನುಭವವಾಗುತ್ತಿದೆ. ಸಮುದ್ರದ ಸಮೀಪ ಇರುವುದರಿಂದ ಗಾಳಿ ತೇವಾಂಶ ಹೆಚ್ಚಿದ್ದು, ಇದರಿಂದ ಉಷ್ಣತೆ ಹೆಚ್ಚು ಅನುಭವವಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಮಳೆಯ ಕೊರತೆ, ಮೋಡರಹಿತ ಆಕಾಶ ಮತ್ತು ಭೂಮಿಯ ಮೇಲ್ಮೈ ಹೆಚ್ಚು ಬಿಸಿಯಾಗುವುದು ಪ್ರಮುಖ ಕಾರಣಗಳಾಗಿವೆ. ಜೊತೆಗೆ ಸಮುದ್ರದಿಂದ ಬೀಸುವ ತೇವಗಾಳಿಯ ಪರಿಣಾಮವಾಗಿ ಬಿಸಿ ಹಾಗೂ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯು ಪ್ರಭಲವಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ. ಅಲ್ಲಿಯವರೆಗೆ ಕೆಲವು ದಿನ ಕರಾವಳಿ ಕರ್ನಾಟಕದಲ್ಲಿ ಬಿಸಿ ಹಾಗೂ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.