ಮಾದಕ ವಸ್ತು ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ಮನೆಯ ಫರ್ವೇಝ್ ಯಾನೆ ದಾವೂದ್ ಫರ್ವೇಝ್ (40) ಮತ್ತು ಪಿಲಾರಿನ ನಝರತ್ ಅಲಿ (37) ಎಂದು ಗುರುತಿಸಲಾಗಿದೆ.
ಆರೋಪಿಗಳು ಬೈಕ್‌ನಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 46,50,000 ರೂ. ಮೌಲ್ಯದ 465.8 ಗ್ರಾಂ ತೂಕದ ಎಂಡಿಎಂಎ ವಸ್ತುವನ್ನು ವಶಪಡಿಸಿಕೊಂಡರು ಎಂದು ತಿಳಿದುಬಂದಿದೆ.
ಫರ್ವೇಝ್ ಎಂಬಾತನು ಯುವ ಸಮೂಹ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಎಂಡಿಎಂಎ ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಫರ್ವೇಝ್ ವಿರುದ್ಧ ಪಾಂಡೇಶ್ವರ, ವಾಮಂಜೂರು, ಬಂದರು, ಬೆಂಗಳೂರಿನ ಅಮೃತಹಳ್ಳಿ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಈತನು ಡ್ರಗ್ ಪೆಡ್ಲರ್ ಆಗಿದ್ದು, ಈತನ ಸ್ನೇಹಿತ ನಝರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.