ರ್ಯಾಂಕ್ ವಿಜೇತೆ ದಿಶಾ ಪೂಜಾರಿಯ ಮುಂದಿನ ಶಿಕ್ಷಣಕ್ಕೆ ಆಸರೆಯಾದ ಉದ್ಯಮಿ ಡಾ. ಬಿ. ಆರ್. ಶೆಟ್ಟಿ
Monday, April 13, 2026
ಮೂಡುಬಿದಿರೆ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿಯ ಮುಂದಿನ ಶಿಕ್ಷಣಕ್ಕೆ ಸಂಪೂಣ೯ ನೆರವು ನೀಡುವುದಾಗಿ ಉದ್ಯಮಿ, ವಿಶ್ವ ಬಂಟರ ಪ್ರತಿಷ್ಠಾನದ ಮಹಾಪೋಷಕ, ಡಾ. ಬಿ. ಆರ್. ಶೆಟ್ಟಿ ಭರವಸೆ ನೀಡಿದ್ದಾರೆ.
ಸೋಮವಾರ ಸಾಯಂಕಾಲ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಕಚೇರಿಯಲ್ಲಿ ದಿಶಾ ಪೂಜಾರಿಯನ್ನು ವಿಶ್ವ ಬಂಟರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಇದೇ ವೇಳೆ ಡಾ. ಬಿ. ಆರ್. ಶೆಟ್ಟಿ ಅವರು ದೂರವಾಣಿ ಮೂಲಕ ದಿಶಾಳೊಂದಿಗೆ ಸಂವಾದ ನಡೆಸಿ ಅಭಿನಂದನೆ ಸಲ್ಲಿಸಿದರು. ಆಕೆಯ ಕನಸಿನಂತೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಹಾಗೂ ಮುಂದಿನ ಗುರಿಯಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಶಿಕ್ಷಣದವರೆಗಿನ ಸಂಪೂರ್ಣ ಟ್ಯೂಷನ್ ಶುಲ್ಕ, ಊಟ ಮತ್ತು ವಸತಿ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಿಶಾ ಪೂಜಾರಿ ಆಳ್ವಾಸ್ ಆವರಣದಲ್ಲಿರುವ ಡಾ. ಬಿ. ಆರ್. ಶೆಟ್ಟಿ ಅವರ ಹೆಸರಿನ ಬ್ಲಾಕ್‌ನಲ್ಲಿ ಸ್ಮರಣಾರ್ಥ ಚಿತ್ರಗಳನ್ನು ತೆಗೆಸಿಕೊಂಡರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿಶ್ವ ಬಂಟರ ಪ್ರತಿಷ್ಠಾನದ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಸಂಜೀವ್ ರೈ, ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ, ಉಪಾಧ್ಯಕ್ಷ ಸಿಎ ಸುದೀರ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸಿಎ ಪ್ರವೀಣ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಡಾ. ಶಿಶಿರ್ ಶೆಟ್ಟಿ, ಪ್ರಕಾಶ್ ಮಾಣೈ ಹಾಗೂ ಸದಸ್ಯರಾದ ದೀಪಕ್ ಪ್ರಸಾದ್, ಜೀವರಾಜ್ ಶೆಟ್ಟಿ ಉಪಸ್ಥಿತರಿದ್ದು ದಿಶಾ ಪೂಜಾರಿಯನ್ನು ಅಭಿನಂದಿಸಿ ಶುಭ ಹಾರೈಸಿದರು.
