ಪ್ರೀತಿಸಬೇಕಾದ ಟಿಪ್ಪುವನ್ನು ಕರಾವಳಿ ದ್ವೇಷಿಸಿದ್ದು ಯಾಕೆ?

ಪ್ರೀತಿಸಬೇಕಾದ ಟಿಪ್ಪುವನ್ನು ಕರಾವಳಿ ದ್ವೇಷಿಸಿದ್ದು ಯಾಕೆ?


ಕರಾವಳಿಯ ಚರಿತ್ರೆಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಎಂಬ ಪುಸ್ತಕ ಎರಡನೆಯ ಬಾರಿಗೆ ಮರುಮುದ್ರಣಗೊಂಡು ಮಂಗಳೂರಿನಲ್ಲಿ ಮತ್ತೆ ಬಿಡುಗಡೆಗೊಂಡಿದೆ. ಯುವಪತ್ರಕರ್ತರಾದ ನವೀನ್ ಸೂರಿಂಜೆಯವರು ಟಿಪ್ಪು ಆಡಳಿತ ಕಾಲದ ಬ್ರಿಟೀಷ್ ದಾಖಲೆಗಳು ಮತ್ತು ಗೆಜೆಟಿಯರ್ ಗಳನ್ನು ಕಲೆ ಹಾಕಿ ಈ ಪುಸ್ತಕವನ್ನು ಬರೆದಿರುವುದು ಕರಾವಳಿಯ ಇತಿಹಾಸದ ದಾಖಲಾತಿಯಲ್ಲಿ ಅತ್ಯಂತ ಪ್ರಮುಖ ಕಾರ್ಯವಾಗಿದೆ.ಅಲ್ಪಸಂಖ್ಯಾತರ ವಿರುದ್ದದ ಕೋಮುದ್ವೇಷದಿಂದ ಬೇಯುತ್ತಿರುವ ಕರಾವಳಿಗೆ 'ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕವು ಸೌಹಾರ್ದತೆಯ ಪಾಠ ಮಾಡುತ್ತದೆ. 

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರನ್ನು ಕರಾವಳಿ ಮಾತ್ರವಲ್ಲ ಕರ್ನಾಟಕದ ಜನತೆ ಹೃದಯದಲ್ಲಿಟ್ಟು ಪೂಜಿಸಬೇಕಾದ ವ್ಯಕ್ತಿತ್ವವಾಗಿದೆ. ಆದರೆ ಬಿಜೆಪಿ-ಸಂಘಪರಿವಾರದ ಹಿಡನ್ ಅಜೆಂಡಾದ ಭಾಗವಾಗಿ ಪ್ರಜ್ಞಾಪೂರ್ವಕವಾಗಿ ಟಿಪ್ಪು ಸುಲ್ತಾನ್ ರನ್ನು ಖಳನಾಯಕರನ್ನಾಗಿ ಚಿತ್ರಿಸಲಾಗಿದೆ.ಒಂದು ಕಾಲದಲ್ಲಿ ಟಿಪ್ಪು ಸುಲ್ತಾನ್ ರನ್ನು  ಮೈಸೂರಿನ ಹುಲಿ, ಬಹದ್ದೂರು, ಬಾದಷಹಾ ಎಂಬಿತ್ಯಾದಿ ಹೆಸರುಗಳಿಂದ ನಾಟಕ, ಯಕ್ಷಗಾನ, ಲಾವಣಿ ಮೂಲಕ ಕೊಂಡಾಡುತ್ತಿದ್ದ ಜನತೆ ಈಗ ಅವರ ಹೆಸರನ್ನೆತ್ತಲೂ ಹಿಂಜರಿಯುತ್ತಿರುವ ಹಿಂದೆ ಸಂಘಪರಿವಾರದ ದ್ವೇಷ ರಾಜಕಾರಣದ ಸಾಕಷ್ಟು ಶ್ರಮವಿದೆ. 

ವಿಪರ್ಯಾಸವೆಂದರೆ ಟಿಪ್ಪು ಸುಲ್ತಾನ್ ರನ್ನು ದ್ವೇಷಿಸುವ ಜನಗಳಿಗೆ ಯಾಕೆ ದ್ವೇಷಿಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ.ಆದರೆ ಟಿಪ್ಪು ಸುಲ್ತಾನ್ ರನ್ನು ಯಾಕೆ ಪ್ರೀತಿಸಬೇಕು ಕರಾವಳಿಗೆ ಟಿಪ್ಪು ನೀಡಿದ ಕೊಡುಗೆ ಏನು ಎಂಬುದಕ್ಕೆ 'ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕ ಸಾಕಷ್ಟು ವಿವರಗಳನ್ನು ಒದಗಿಸುತ್ತದೆ. ಈ ಪುಸ್ತಕವು ಟಿಪ್ಪು ಕಾಲದ ಶ್ರೀಮಂತ ಕರಾವಳಿಯ ಅನುಭವವನ್ನು ನೀಡುತ್ತದೆ. ಆ ಶ್ರೀಮಂತಿಕೆ ಎನ್ನುವುದು ವಾಣಿಜ್ಯೋದ್ಯಮಕ್ಕೆ ಮಾತ್ರ ಸೀಮಿತವಾಗದೇ, ಜನಸಾಮಾನ್ಯರ ಬದುಕು ಮತ್ತು ಸೌಹಾರ್ಧತೆಗೂ ವಿಸ್ತರಿಸಿಕೊಂಡಿತ್ತು ಎಂಬುದು ಗಮನಾರ್ಹ. 

ಇಂದಿನ ವಾಣಿಜ್ಯ ಕೇಂದ್ರಿತ ಕರಾವಳಿಯಲ್ಲಿ ಹೈದರಾಲಿ ಮತ್ತು ಟಿಪ್ಪುವಿನ ಸಾಧನೆಯ ಪ್ರತಿಫಲವಿದೆ. ಕರಾವಳಿಯ ಎಲ್ಲಾ ವಿಭಾಗದ ಜನತೆಯನ್ನು ಒಳಗೊಂಡು ನಡೆಸಿದ ವ್ಯಾಪಾರ ವಹಿವಾಟುಗಳು, ಧಾರ್ಮಿಕ ಕೆಲಸಗಳು ಕರಾವಳಿಯನ್ನು ಕಟ್ಟಿ ಬೆಳೆಸಿದೆ.‌ ಮೂರು-ನಾಲ್ಕು ಗ್ರಾಮಗಳ ಆಡಳಿತ ಮಾಡುತ್ತಿದ್ದ ಅಜಿಲರು, ಚೌಟರು ಸೇರಿದಂತೆ ಸಣ್ಣ ರಾಜರುಗಳನ್ನೂ ಟಿಪ್ಪು 'ಪ್ರಜಾಪ್ರಭುತ್ವ ಮಾದರಿ'ಯಲ್ಲಿ ನಡೆಸಿಕೊಳ್ಳುತ್ತಿದ್ದರು. ಸಣ್ಣ ರಾಜರುಗಳು, ತನ್ನದೇ ಸೇನಾಧಿಕಾರಿಗಳು ಜನತೆಗೆ ತೊಂದರೆ ನೀಡಿದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಇವೆಲ್ಲವನ್ನು ನೋಡಿದಾಗ ಟಿಪ್ಪು ಮತ್ತು ಹೈದರ್ ಅಲಿಯವರ ವ್ಯಕ್ತಿತ್ವ- ಆದರ್ಶಗಳು ಈಗಿನ ಆಡಳಿತಕ್ಕೆ ಮಾದರಿಯಾಗಿದೆ.

ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪುಸ್ತಕವು ಟಿಪ್ಪು ಮತ್ತು ಹೈದರಾಲಿಯ ಆಡಳಿತ ವೈಖರಿ, ದೇಶಪ್ರೇಮವನ್ನು ಕೂಡ ಪ್ರಸ್ತುತಪಡಿಸುತ್ತದೆ .ತನ್ನ ಅಧೀನದಲ್ಲಿದ್ದ ತುಂಡರಸರು ಜನತೆಗೆ ಅನ್ಯಾಯ ಮಾಡಿದಾಗ ಅವರ ಕಿವಿ ಹಿಂಡಿ ಜನರ ಪರವಾಗಿ ಧೃಢವಾಗಿ ನಿಂತಿರುವುದು ಹಾಗೂ ಅದೇ ತುಂಡರಸರಿಗೆ ಆಡಳಿತ ನಡೆಸಲು ಆರ್ಥಿಕ ಸಮಸ್ಯೆ ತಲೆದೋರಿದಾಗ ಇದೇ ಟಿಪ್ಪು ಹೈದರಾಲಿ ದೊಡ್ಡ ಮಟ್ಟದ ಸಹಾಯ ಮಾಡಿದ ಉದಾಹರಣೆಯೂ ಇದೆ. ತನ್ನೆಲ್ಲ ಆಡಳಿತ ಸೇವೆಯಲ್ಲಿ ಜನತೆಯ ಹಾಗೂ ದೇಶದ ಹಿತವನ್ನು ಬಗೆದಿರುವ ಟಿಪ್ಪು ನಿಜವಾದ ದೇಶಪ್ರೇಮಿ ಎನಿಸಿಕೊಂಡಿದ್ದಾರೆ. ಬ್ರಿಟಿಷರ ಕಡು ವಿರೋಧಿಯಾದ ಟಿಪ್ಪು ಯಾವುದೇ ಕಾರಣಕ್ಕೂ ತಾನು ಅತಿಯಾಗಿ ಪ್ರೀತಿಸುವ ತನ್ನ ನಾಡು ಬ್ರಿಟಿಷರ ಪಾಲಾಗದಂತೆ ಅತೀ ಎಚ್ಚರ ವಹಿಸಿದ್ದರು. ಇದರಿಂದಾಗಿ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಆ ಕಾಲದಲ್ಲೂ ಬ್ರಿಟಿಷರ ಎದೆನಡುಗಿಸಿದ ಟಿಪ್ಪು ಅನೇಕ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದ್ದರು. ಟಿಪ್ಪುವಿನ‌ ಪರಾಕ್ರಮವನ್ನು ಕಂಡು ಬ್ರಿಟಿಷರು ಹೇಗಾದರೂ ಮಾಡಿ ಟಿಪ್ಪುವನ್ನು ಅಂತ್ಯಗೈಯ್ಯಲೇಬೇಕೆಂದು ಪಣತೊಟ್ಟು, ಪಿತೂರಿಯನ್ನು ನಡೆಸುತ್ತಲೇ ತನ್ನ ಒಡೆದಾಳುವ ನೀತಿಯನ್ನು ಮುನ್ನಲೆಗೆ ತಂದು ಟಿಪ್ಪುವನ್ನು ಹತ್ಯೆಗೈಯ್ಯಲಾಯಿತು. ಅದರಿಂದ ಬ್ರಿಟಿಷರ ಮೂಲ ಯೋಚನೆ ಟಿಪ್ಪುವನ್ನು ಸೋಲಿಸುವುದು ಮಾತ್ರವಲ್ಲ ಭಾರತವನ್ನೇ ತನ್ನ ಕೈವಶ ಮಾಡುವುದೆಂದು ಆ ಘಳಿಗೆಯಲ್ಲೇ ಸಾಬೀತಾಗುತ್ತದೆ. 'ಭಾರತ ಇನ್ಮುಂದೆ ನಮ್ಮದು' ಎಂದು ಬ್ರಿಟಿಷರು ಕೂಗಿದ್ದು ಹಾಗೂ ಶ್ರೀರಂಗಪಟ್ಟಣ ಕೋಟೆಯ ಮೇಲೆ ಬ್ರಿಟಿಷ್ ಧ್ವಜವನ್ನು ಹಾರಿಸಿದ್ದೇ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ನಿದರ್ಶನ.

ಟಿಪ್ಪು ಹೈದರಾಲಿಯ ಜನಪರ ಆಡಳಿತದಿಂದ ಕಂಗೆಟ್ಟ ಬ್ರಿಟಿಷರು ಆತನ‌ ಸಾವಿನ ಬಳಿಕವೂ ಅವನ ವಿರುದ್ಧ ಕತ್ತಿಮಸೆಯುತ್ತ ತನ್ನ ಇತಿಹಾಸಕಾರರ ಮೂಲಕ ಟಿಪ್ಪು ಒಬ್ಬ ಮತಾಂಧ, ದುರಾಡಳಿತಕಾರಿ, ಹಿಂದೂ ವಿರೋಧಿ, ಕ್ರಿಶ್ಚಿಯನ್ ವಿರೋಧಿ ಎಂದು ಬರೆಯಿಸಿ ಅದನ್ನೇ ಮುಂದಿನ ದಿನಗಳಲ್ಲಿ ದೊಡ್ಡದಾಗಿ ಅಪಪ್ರಚಾರಗಳನ್ನು ನಡೆಸಲಾಯಿತು. ಇದು ಎಷ್ಟರಮಟ್ಟಿಗೆ ಜನತೆಯ ಮಧ್ಯೆ ಆಳವಾಗಿ ಬೇರೂರಿದೆ ಎಂದರೆ ಕರಾವಳಿಯ ಕ್ರಿಶ್ಚಿಯನ್ ಸಮುದಾಯದ ಮಧ್ಯೆ ಟಿಪ್ಪು 26 ಚರ್ಚ್ ಗಳನ್ನು ಧ್ವಂಸ ಮಾಡಿದ್ದ, ಉಳಿದ 2 ಚರ್ಚ್ ಗಳನ್ನು ನಾಶ ಮಾಡಲು ಅವನಿಂದ ಆಗಿಲ್ಲ ಯಾಕೆಂದರೆ ಅದು ಗುಡ್ಡದ ಮೇಲಿತ್ತು ಹಾಗಾಗಿ ಅದು ಅವನಿಗೆ ಗೊತ್ತಾಗಲಿಲ್ಲ ಎನ್ನುವ ಸುಳ್ಳನ್ನು ಇಂದಿಗೂ ಕ್ರಿಶ್ಚಿಯನ್‌ ಸಮುದಾಯ ನಂಬುತ್ತಿದೆ. ವಾಸ್ತವಾಂಶ ಏನೆಂದರೆ ಟಿಪ್ಪು ಯಾವತ್ತೂ ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳ ಮೇಲೆ ಹಿಂದೂ ಧರ್ಮದ ಅನುಯಾಯಿಗಳ ಮೇಲೆ ಅವರ ದೇವಾಲಯ ಚರ್ಚ್ ಗಳ ಮೇಲೆ ಧಾಳಿ ನಡೆಸಿಯೇ ಇಲ್ಲ.ಯಾವ ಧರ್ಮದವರೇ ಇರಲಿ, ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದ ಯಾರನ್ನೂ ಕೂಡ ಟಿಪ್ಪು ಸಹಿಸುತ್ತಿರಲಿಲ್ಲ ಎಂದು ಅತ್ಯಂತ ಧೃಢವಾಗಿ ಈ ಪುಸ್ತಕವು ದಾಖಲೆಗಳ ಸಮೇತ ರುಜುವಾತು ಮಾಡಿದೆ. ಇಂದಿಗೂ ಭಾರತೀಯರು ಕೊಂಡಾಡಬೇಕಾದ ಟಿಪ್ಪುವನ್ನು ಮತಾಂಧ, ಕ್ರೂರಿ, ಪಾಪಿ ಎಂದು ಬಿಂಬಿಸುವಲ್ಲಿ ಗತಿಸಿದ ಬ್ರಿಟಿಷರು ಭಾರತದಲ್ಲಿ  ಯಶಸ್ವಿಯಾಗಿದ್ದಾರೆ ಎನ್ನುವುದು ಭಾರತದ ದುರಂತ. 

ಒಟ್ಟಿನಲ್ಲಿ 'ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕವು ಟಿಪ್ಪು ಹೈದರಾಲಿ ಅಪ್ಪಟ ದೇಶಪ್ರೇಮಿ, ಉತ್ತಮ ಆಡಳಿತಗಾರ ಎಂದು ಸಾಬೀತುಪಡಿಸಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸಿದೆ. ಟಿಪ್ಪುವಿನ‌ ಹೆಸರಿನಲ್ಲಿ ಮತೀಯ ರಾಜಕಾರಣ ನಡೆಸುವ ಬಿಜೆಪಿ ಸಂಘಪರಿವಾರದ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಈ ಪುಸ್ತಕ ಕರಾವಳಿಯ ಪ್ರತೀ ಮನೆಯಲ್ಲೂ ಸಂಗ್ರಹಯೋಗ್ಯವಾಗಿದೆ. ಯುವ ಸಮುದಾಯದ ಕೈಗೆ ಈ ಪುಸ್ತಕ ಕೈಯಿಂದ ಕೈಗೆ ಹಸ್ತಾಂತರವಾಗುವುದರ ಮೂಲಕ ಕರಾವಳಿಯ ನೈಜ ಇತಿಹಾಸವನ್ನು ಕರಾವಳಿಗರಿಗೆ ಪಸರಿಸಬೇಕಿದೆ. ಈ ಮೂಲಕ ಟಿಪ್ಪು-ಹೈದರ್ ನಡೆದಾಡಿದ, ಆಡಳಿತ ಮಾಡಿದ ನೆಲದವರು ನಾವು ಎಂಬ ಆತ್ಮಾಭಿಮಾನ, ನಾಡಪ್ರೇಮಿಗಳು ನಾವಾಗಬೇಕಿದೆ ಎನ್ನುತ್ತಾರೆ ಸುನಿಲ್ ಕುಮಾರ್ ಬಜಾಲ್ ಅವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article