ಒಂದು ರೂಪಾಯಿಗೆ ಶರ್ಟ್-ಮುಗಿಬಿದ್ದ ಜನತೆ: ಜನರ ನಡುವೆ ಸಿಲುಕಿದ ಶಾಸಕ
ಮಂಗಳೂರು ಹೊರವಲಯದ ಬಜ್ಪೆ ಪೇಟೆಯಲ್ಲಿ ಬಟ್ಟೆ ಅಂಗಡಿಯ ಉದ್ಘಾಟನೆಯನ್ನು ಮೇ 17ರಂದು ಏರ್ಪಡಿಸಲಾಗಿತ್ತು. ಜನರನ್ನು ಆಕರ್ಷಿಸಲು ಎಂಬಂತೆ ಒಂದು ರೂ.ಗೆ ಒಂದು ಆಕರ್ಷಕ ಶರ್ಟ್ ಎನ್ನುವ ಆಫರ್ ಇರೋದಾಗಿ ವಿಡಿಯೋ ಹರಿಯಬಿಡಲಾಗಿತ್ತು. ವಿಡಿಯೋ ಇನ್‌ಸ್ಟಾ ಗ್ರಾಮ್ ಪೇಜ್ ಗಳಲ್ಲಿ ವೈರಲ್ ಆಗಿದ್ದು ಯುವ ಜನರು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಬಟ್ಟೆ ಅಂಗಡಿಯಲ್ಲಿ ಕಂಟ್ರೋಲ್ ಮಾಡಲಾಗದೆ ಜನರನ್ನು ಒಳಗೆ ಹೊರಗೆ ಕಳಿಸುವುದೇ ಅಸಾಧ್ಯ ಎನ್ನುವಂತಾಗಿತ್ತು.
ವಿಚಿತ್ರ ಅಂದರೆ, ಬಟ್ಟೆ ಅಂಗಡಿ ಉದ್ಘಾಟನೆಗೆಂದು ಬಂದಿದ್ದ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಇವರ ಎಡೆಯಲ್ಲಿ ಸಿಕ್ಕಿಬೀಳುವಂತಾಗಿತ್ತು. ಜನರ ನಡುವೆ ಸಿಕ್ಕಿಬಿದ್ದು ಶಾಸಕರೇ ಅಪ್ಪಚ್ಚಿಯಾಗಿದ್ದು, ಅಲ್ಲಿಂದ ಹೊರಬರುವುದಕ್ಕೆ ಉಸ್ಸಪ್ಪಾ ಎನ್ನುವಂತಾಗಿತ್ತು. ಉಚಿತ ಕೊಡುತ್ತೇವೆ ಅಂದ್ರೆ ಎಷ್ಟೊಂದು ಜನ ಮುಗಿಬೀಳುತ್ತಾರೆ ಅನ್ನುವುದಕ್ಕೆ ಇಲ್ಲಿ ಸೇರಿದ್ದ ಜನರೇ ಸಾಕ್ಷಿಯಾಗಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಂದು ಸೇರಿದ್ದು, ಬ್ಯಾಗಿ ಪ್ಯಾಂಟ್, ಕಂಪನಿ ಶರ್ಟ್ ಗಳನ್ನು ಕೊಳ್ಳಲು ಮುಂದಾಗಿದ್ದರು. ಒಂದೇ ದಿನ ಅಂಗಡಿ ಮಳಿಗೆ ಖಾಲಿಯಾಗುವಷ್ಟರ ಮಟ್ಟಿಗೆ ಜನ ಸೇರಿದ್ದರು. ಆದರೆ ಮೊದಲು ಬಂದ ನೂರು ಜನರಿಗೆ ಮಾತ್ರ ಒಂದು ರೂ. ಶರ್ಟ್ ಆಫರ್ ಇತ್ತು. ಆದರೆ ಅಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು ತೀವ್ರ ನೂಕುನುಗ್ಗಲು ಉಂಟಾಗಿತ್ತು.