ಮಂಚಿ ಬಳಿ ಎಂಡಿಎಂಎ ಮಾದಕ ವಸ್ತು ಅಕ್ರಮ ಸಾಗಾಟ ಪತ್ತೆ: ಇಬ್ಬರ ಬಂಧನ
ಬಂಟ್ವಾಳ: ವಾಹನವೊಂದರಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪಂಜಾಲ ಎಂಬಲ್ಲಿ ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಪುತ್ತೂರು ಕಲೆಂಬಿ ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಹಾಗೂ ಮೊಹಮದ್ ಶಾಹೀಂ (19) ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಮತ್ತವರ ಸಿಬ್ಬಂದಿಗಳು ಮಂಚಿ ಗ್ರಾಮದ ಪಂಜಾಲ ಕ್ರಾಸ್ ಎಂಬಲ್ಲಿ ಹೊಂಚು ಹಾಕಿ ನಿಂತಿದ್ದ ವೇಳೆ ಬಂಟ್ವಾಳ ಕಡೆಗೆ ಅನುಮಾನಾಸ್ಪದವಾಗಿ ಬರುತ್ತಿದ್ದ ಕೆಎ-20-ಝಡ್-9585 ನೊಂದಣಿಯ ಬೊಲೆರೋ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮಾದಕ ವಸ್ತು ಎಂಡಿಎಂಎ ಪತ್ತೆಯಾಗಿದೆಯೆನ್ನಲಾಗಿದೆ.
ವಾಹನಗಳನ್ನು ತಡೆದು ತಪಾಸಣೆ ನಡೆಸಿದ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದೆ. ವಾಹನದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಲಾಭಗಳಿಸುವ ಉದ್ದೇಶದಿಂದ ಈ ಮಾದಕ ವಸ್ತುವನ್ನು ಸಾಗಿಸುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.
ತಕ್ಷಣ ಆರೋಪಿಗಳನ್ನು ಬಂಧಿಸಿ ವಾಹನದಲ್ಲಿದ್ದ ಸುಮಾರು 46 ಲಕ್ಷ ರೂ. ಮೌಲ್ಯದ 423 ಗ್ರಾಂ ಎಂಡಿಎಂ ಮಾದಕ ವಸ್ತು, ಮೊಬೈಲ್ ಫೋನ್, ಬೊಲೆರೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.