ಮೇ 5 ರಂದು ಉಳ್ಳಾಲ ತಾಲೂಕು ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನ
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 5ರ ಬೆಳಗ್ಗೆ 9.30ಕ್ಕೆ ಹೂಹಾಕುವ ಕಲ್ಲು ಜಂಕ್ಷನ್ನಿಂದ ಸಮ್ಮೇಳನ ಸಭಾಂಗಣದ ತನಕ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಸ್. ಕೆ. ಅಬ್ದುಲ್ ಖಾದರ್ ಹಾಜಿ ಉದ್ಘಾಟಿಸಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಹೆಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಕರ್ನಾಟಕ ವಿಧಾನಸಭಾಧ್ಯಕ್ಷ ಡಾ. ಯು.ಟಿ. ಖಾದರ್ ಫರೀದ್ ಸಮ್ಮೇಳನ ಉದ್ಘಾಟಿಸಲಿದ್ದು, ಬಹುಬಾಷಾ ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ನಾನಿ ಅಲ್ಯಾರಿಸ್, ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಇಕ್ಯಾಲ್ ಕೆ, ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಉಳ್ಳಾಲ ತಾಲೂಕು ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಮತ್ತು ಮುಡಿಪು ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಝುಲೇಖ ಮುಮ್ತಾಜ್ ಅವರ ’ನಿಲಾವು’ (ಲೇಖನಗಳ ಸಂಕಲನ), ಆಯಿಷಾ ಯು.ಕೆ ಸಂಪಾದಕತ್ವದ ’ಹಸ್ರತ್’ (ಕವನ ಸಂಕಲನ) ಬ್ಯಾರಿ ಕೃತಿಗಳು ಬಿಡುಗಡೆಯಾಗಲಿವೆ ಎಂದು ಹೇಳಿದರು.
ಮಧ್ಯಾಹ್ನ 12ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷಿಯನ್ನು ಉಪನ್ಯಾಸಕ ಪ್ರೊ. ಹೈದರಾಲಿ ಕೆ. ನಿರೂಪಿಸಲಿದ್ದು, ಪ್ರೊ. ನಿಯಾಝ್ ಪಡೀಲ್, ಕೆ. ಎಂ. ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ, ಶಾಹಿದಾ ಬಿ.ಎಂ. ಮತ್ತು ಶಮೀಮಾ ಕುತ್ತಾರ್ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ರಿಂದ ಬ್ಯಾರಿ ಕವಿಗೋಷ್ಠಿ ನಡೆಯಲಿದೆ ಎಂದರು.
ಸಂಜೆ ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಟಿ. ಇಸ್ಮಾಯಿಲ್ ಮಾಸ್ಟರ್, ಅಬ್ದುಲ್ ಖಾದರ್ ಸಣ್ಣ ಬೈಲ್ ಪರಪ್ಪು, ಖತೀಜಮ್ಮ ನಡುಪದವು, ಬೀಫಾತುಮ್ಮ ಮಾರ್ಗತಲೆ ಸನ್ಮಾನ ಸ್ವೀಕರಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ, ಮಂಗಳೂರು ವಿವಿ ಕುಲಪತಿ ಡಾ. ಪಿ.ಎಲ್ ಧರ್ಮ ಮತ್ತು ಝಾಹಿದ್ ಮಲಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಅಬೂಬಕ್ಕರ್ ಸಿದ್ದೀಕ್ ಸಮಾರೋಪ ಭಾಷಣ ಮಾಡಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ದಫ್, ಬ್ಯಾರಿ ಹಾಡುಗಳ ಸಂಭ್ರಮ ಮತ್ತು ಸತ್ತಾರ್ ಗೂಡಿನ ಬಳಿ ತಂಡದಿಂದ ’ತೆರು ತಪ್ಪಿರ್’ ಬ್ಯಾರಿ ನಾಟಕ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಅಂಗವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು .
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿ. ಇಬ್ರಾಹಿಂ ನಡುಪದವು, ಕಾರ್ಯಾಧ್ಯಕ್ಷ ಆಲಿಕುಂಞ ಪಾರೆ, ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್, ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕಿ ಸಿಹಾನ ಬಿ.ಎಂ., ಸಹ ಸಂಚಾಲಕಿ ಆಯಿಶಾ ಪೆರ್ನೆ ಉಪಸ್ಥಿತರಿದ್ದರು.