ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡನೀಯ: ಐವನ್ ಡಿಸೋಜ
ಮಂಗಳೂರು: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 991 ರೂ.ಗಳಿಗೆ ಏರಿಕೆ ಮಾಡಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳು ಮುಗಿದ ತಕ್ಷಣ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಬಿಜೆಪಿ ಪಕ್ಷದ ನಿಜ ಸ್ವರೂಪವನ್ನು ಬಯಲಿಗೆಳೆದಿದೆ. ಚುನಾವಣೆ ಸಂದರ್ಭದಲ್ಲಿ ಜನರ ಮತಗಳನ್ನು ಪಡೆಯಲು ಯಾವುದೇ ದರ ಏರಿಕೆ ಮಾಡದೆ, ಇದೀಗ ಮತ ಪಡೆದುಕೊಂಡ ನಂತರ ಜನರ ಮೇಲೆ ಬೆಲೆ ಭಾರ ಹಾಕಲಾಗುತ್ತಿದೆ. ಇದು ಕರಾವಳಿ ಭಾಗದ ಜನರಿಗೆ ಮಾಡಿದ ದೊಡ್ಡ ಮೋಸ ಎಂದು ಖಂಡಿಸಿದ್ದಾರೆ.
ದೇಶದ ಬಡಜನರ ಕಾರ್ಮಿಕ ವರ್ಗದ ಮೇಲೆ ಹೊರೆ ಹಾಕುವಂತಹ ನಿರ್ಧಾರ ಕೈಗೊಂಡಿರುವುದು ಅತ್ಯಂತ ಖಂಡನೀಯ. ಈಗಾಗಲೇ ಗ್ಯಾಸ್ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿದ ವೆಚ್ಚದಿಂದ ಅನೇಕ ಹೋಟೆಲ್ ಗಳು ಹಾಗೂ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಜನವಿರೋಧಿ ನೀತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ನಿಲುವು ಜನಪರವಾಗಿಲ್ಲ. ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರ ನಿರಂತರವಾಗಿ ನಡೆದುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ನೆರವಾಗುವ ಯಾವುದೇ ತೀರ್ಮಾನಗಳನ್ನು ಬಿಜೆಪಿ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇತ್ತೀಚಿನ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಡಲು ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣವಾಗಿವೆ. ದೇಶದಲ್ಲಿ ಜನಪರವಾಗಿ ಕೆಲಸವನ್ನು ಮಾಡದೇ ಬಿಜೆಪಿ ಅಧಿಕಾರಕ್ಕೆ ಬರುವಂತಹ ಸಂದರ್ಭದಲ್ಲಿ ಜನರಿಗೆ 15 ಲಕ್ಷ ರೂ ಕೊಡುವ ಅಸೆ ತೋರಿಸಿ ಪೆಟ್ರೋಲ್ ಡಿಸೇಲ್ ನ ದರ ಏರಿಕೆ ಮಾಡಿ ಈ ಏರಿಕೆಯಿಂದ ಆಟೋ ಚಾಲಕರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ದಿನನಿತ್ಯದ ಜೀವನ ಸಾಗಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.
ಪ್ರಸಕ್ತ ಏರಿರುವ ಈ ಗ್ಯಾಸ್ ದರ ಏರಿಕೆ ಕುರಿತು ಬಿಜೆಪಿ ನಾಯಕರು ಕೂಡಲೇ ಉತ್ತರ ನೀಡಬೇಕು. ಬಿಜೆಪಿ ನಾಯಕರು ಎಲ್ಲಿ ಅಡಗಿದ್ದಾರೆ ಎಂದು ಜನರಿಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.