1770 ಕೆ.ಜಿ. ತ್ಯಾಜ್ಯ ಕಡಲಕಿನಾರೆಯಿಂದ ಮುಕ್ತ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಭಾನುವಾರ ಕೋಡಿ ಗ್ರಾಮಪಂಚಾಯತ್ ನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ, ಗೀತಾನಂದ ಫೌಂಡೇಶನ್ ಮಣೂರು, ಕೋಡಿ ಗ್ರಾಮಪಂಚಾಯತ್, ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು, ಶ್ರೀ ಕೃಷ್ಣ ಪ್ರಸಾದ್ ಕ್ಯಾಶ್ಯೂ, ಸ್ಟೀಲ್ ಇಂಡಸ್ಟ್ರೀಸ್ ವಂಡಾರು ಇವರುಗಳ ಸಹಯೋಗದೊಂದಿಗೆ 300ನೇ ಭಾನುವಾರದ ಪರಿಸರಸ್ನೇಹಿ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚವರ್ಣ ಸಂಘಟನೆಯ ಈ ರೀತಿಯ ನಿರಂತರ ವಾರಗಳ ಸ್ವಚ್ಛತಾ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಉಡುಪಿ ಜಿಲ್ಲೆ ಸ್ವಚ್ಛತೆಯ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ. ಅದರಂತೆ ನಡೆದರೆ ದೇಶದಲ್ಲೆ ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಹೆದ್ದಾರಿಗಳಲ್ಲಿ ಕಸ ಎಸೆಯುವ ಮನಸ್ಥಿತಿ ಅತ್ಯಂತ ಹೀನವಾದುದು. ಪಂಚವರ್ಣ ಸಂಘಟನೆಯ ಇಂತಹ ಅಭಿಯಾನವನ್ನು ನೋಡಿಯಾದರೂ ಜನ ಕಸ ಎಸೆಯುವ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸ್ವಚ್ಛತೆಯಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿ ನಿಲ್ಲಲಿದೆ. 300ನೇ ವಾರ ಆಯೋಜನೆಯ ಸ್ವಚ್ಛತಾ ಅಭಿಯಾನ ಹೊಸ ದಿಕ್ಕಿಗೆ ಪ್ರೇರಣೆಯಾಗಲಿದೆ ಎಂದರು.
ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್ ಸಿ. ಕುಂದರ್ ಮಾತನಾಡಿ, 300ನೇ ವಾರವನ್ನು ಆನಂದ್ ಸಿ. ಕುಂದರ್ ಹುಟ್ಟುಹಬ್ಬಕ್ಕೆ ಸಮರ್ಪಿಸಿದ ಹಿನ್ನೆಲೆಯನ್ನು ವಿವರಿಸಿದರು. ಸಮಾಜ ಪರಿವರ್ತನೆಗೆ ಈ ಅಭಿಯಾನ ಸಹಕಾರಿಯಾಗಲಿದೆ. ನಮ್ಮ ಕಸ ನಮ್ಮ ಜವಾಬ್ದಾರಿ ಎಂಬುವುದನ್ನು ಅರಿತು ಕಾರ್ಯನಿರ್ವಹಿಸಿದರೆ ಇಡೀ ಪರಿಸರ ಸ್ವಚ್ಛವಾಗಿಡಲು ಸಾಧ್ಯ ಎಂದು ತನಗೆ ಸಮರ್ಪಿಸಿದ ಈ ಅಭಿಯಾನಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ಇದೇ ವೇಳೆ ನೂರು ವಾರಗಳನ್ನು ಸಂಭ್ರಮಿಸಿದ ಗೀತಾನಂದ ಫೌಂಡೇಶನ್ ನ ಆನಂದ ಸೃಷ್ಠಿ ಸಂಯೋಜಕ ಶ್ರೀನಿವಾಸ್ ಕುಂದರ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಸ್ವಚ್ಛತಾ ಅಭಿಯಾನದ ಪ್ರಯುಕ್ತ ಕ್ಯಾಪ್ಸ್ ಫೌಂಡೇಶನ್ ಕೊಡಮಾಡಿದ ಟೀ ಶಟ್೯ ಹಾಗೂ ಶ್ರೀ ಕೃಷ್ಣ ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್ ನೀಡಿದ ಟೊಪ್ಪಿಯನ್ನು ಅನಾವರಣಗೊಳಿಸಲಾಯಿತು.
ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಜಿಲ್ಲಾಪಂಚಾಯತ್ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸ್ವಚ್ಛಭಾರತ್ ಮಿಷನ್ ಸಂಯೋಜಕ ರಘುನಾಥ್,
ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂ, ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಸಂಪತ್ ಕುಮಾರ್ ಶೆಟ್ಟಿ, ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾ.ಪಂ. ಇಒ ಎಚ್.ವಿ. ಇಬ್ರಾಹಿಂಪುರ, ಮುಂಬೈ ಒಎನ್ ಜಿಸಿ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್,ಕೋಡಿ ಪಖಚಾಯತ್ ಮಾಜಿ ಅಧ್ಯಕ್ಷರಾದ ಗೀತಾ ಖಾರ್ವಿ, ಪ್ರಭಾಕರ್ ಮೆಂಡನ್, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ ಪಿಡಿಒ ಉಮೇಶ್, ಸಾಲಿಗ್ರಾಮ ಪಟ್ಟಣಪಂಚಾಯತ್ ಆರೋಗ್ಯ ನಿರೀಕ್ಷಣಾಧಿಕಾರಿ ಮಮತಾ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ತಾರಾನಾಥ ಹೊಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಕೋಟ ವಲಯ ಮೇಲ್ವಿಚಾರಕ ನಾಗೇಶ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಕೋಡಿ ಪಂಚಾಯತ್ ಪಿಡಿಒ ರವೀಂದ್ರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚವರ್ಣ ಸುಜಾತ ಬಾಯರಿ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ರವೀಂದ್ರ ಕೋಟ ವಂದಿಸಿದರು.
5 ವರೆ ಕಿಮೀ 1770 ಕೆ.ಜಿ. ತ್ಯಾಜ್ಯ ತೆರವು:
ಕೋಡಿ ಗ್ರಾಮಪಂಚಾಯತ್ ಹೊಸಬೇಂಗ್ರೆ ಲೈಟ್ ಹೌಸ್ ನಿಂದ ಆರಂಭಗೊಂಡ ಈ ಸ್ವಚ್ಛತಾ ಅಭಿಯಾನ ಸಾಲಿಗ್ರಾಮ ಪಟ್ಟಣಪಂಚಾಯತ್, ಕೋಟತಟ್ಟು ಗ್ರಾಮಪಂಚಾಯತ್, ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲಾ ಬೀಚ್ ಗಳಲ್ಲಿರುವ ಬಾರಿ ಪ್ರಮಾಣದ ಸುಮಾರು 1770 ಕೆ.ಜಿ. 882 ಚೀಲ ತ್ಯಾಜ್ಯವನ್ನು ಬೀಚ್‌ನಿಂದ ತೆರವುಗೊಳಿಸಲಾಯಿತು.
ಯಾವ ಯಾವ ಸಂಘಟನೆ, ಶಿಕ್ಷಣ ಸಂಸ್ಥೆಗಳು ಭಾಗಿ:
ಈ ಬೃಹತ್ ಬೀಚ್ ಕ್ಲಿನಿಂಗ್ ಅಭಿಯಾನದಲ್ಲಿ ಈಗಾಗಲೇ ಹಲವು ಸಂಘಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿವೆ ಅವುಗಳಲ್ಲಿ ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳು, ಎಂ.ಐ.ಟಿ ಮಣಿಪಾಲ, ಎಂ.ಐ.ಟಿ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆಯ ವಿವಿಧ ವಲಯ ಒಕ್ಕೂಟ ಇದರ ಶೌರ್ಯ ಟೀಮ್, ಲಕ್ಷ್ಮೀಸೋಮಬಂಗೇರ ಡಿಗ್ರಿ ಕಾಲೇಜು, ವಿವೇಕ ವಿದ್ಯಾಸಂಸ್ಥೆ, ಕೋಟ, ಕೋಟತಟ್ಟು, ಕೋಡಿ ಗ್ರಾಮಪಂಚಾಯತ್‌ಗಳ ಸಂಜೀವಿ ಒಕ್ಕೂಟ, ಸ್ತ್ರೀ ಶಕ್ತಿ ಸಂಘಟನೆಗಳು, ಮಾಜಿ ಪಂಚಾಯತ್ ಪ್ರತಿನಿಧಿಗಳು, ಜನತಾ ಸಮೂಹ ಸಂಸ್ಥೆ ಕೋಟ, ಫಾರ್ಚುನ್ ನರ್ಸಿಂಗ್ ಕಾಲೇಜು ಮಾಬುಕಳ, ಗೀತಾನಂದ ಫೌಂಡೇಶನ್ ಮಣೂರು, ಶ್ರೀರಾಮ ಪರ್ವ ಗೆಳೆಯರ ಬಳಗ ಕೋಡಿ, ಪ್ರಗತಿ ಯುವಕ ಮಂಡಲ ಕೋಡಿ, ಸುಮಧುರ ಯುವಕ ಸಂಘ ಕೋಡಿ, ವಿನ್ ಲೈಟ್ ಸ್ಪೋಟ್ಸ್೯ ಕ್ಲಬ್ ಪಾರಂಪಳ್ಳಿ, ಅರಮ ವಿಜಯ ಸ್ಪೋರ್ಟ್ಸ್ ಕ್ಲಬ್ ಪಡುಕರೆ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಪಡುಕರೆ, ಪಾಂಚಜನ್ಯ ಸಂಘ ಪಾರಂಪಳ್ಳಿ, ಅಯೋಧ್ಯಾ ಫ್ರೆಂಡ್ಸ್ ಕೋಡಿ, ಕ್ಲಿನ್ ಕುಂದಾಪುರ, ಕ್ಲಿನ್ ತ್ರಾಸಿ, ಕ್ಲಿನ್ ಕಿನಾರ ಬೈಂದೂರು, ಕೋಡಿ ಗ್ರಾ.ಪಂ., ಕೋಟತಟ್ಟು ಗ್ರಾ.ಪಂ., ಕೋಟ ಗ್ರಾ.ಪಂ., ಸಾಲಿಗ್ರಾಮ ಪಟ್ಟಣಪಂಚಾಯತ್‌ಗಳು ಭಾಗಿಯಾಗಿ ಸಹಯೋಗ ನೀಡದವು.
500 ಅಧಿಕ ಮಂದಿ ಸ್ವಚ್ಛಾಗೃಹಿಗಳು ಭಾಗಿ:
ಇದೇ ಮೊದಲ ಬಾರಿ ಈ ಪ್ರಮಾಣದ ದೂರ ಕ್ರಮಿಸುವ ಬೀಚ್ ಕ್ಲಿನಿಂಗ್ ಅಭಿಯಾನ ರಾಜ್ಯದಲ್ಲೆ ಪ್ರಥಮ ಬಾರಿಗೆ ಆಯೋಜನೆಗೊಂಡಿದ್ದು, ಸುಮಾರು 4,500 ಕ್ಕೂ ಅಧಿಕ ಮಂದಿ ಈ ಕ್ಲಿನ್ ಅಭಿಯಾನದಲ್ಲಿ ಭಾಗಿಯಾಗಿ ಹೊಸ ದಾಖಲೆ ನಿರ್ಮಿಸಿದರು. ಜಿಲ್ಲಾ ಪೋಲಿಸ್ ಇಲಾಖೆ, ಕರಾವಳಿ ಕಾವಲು ಪಡೆ, ಆರೋಗ್ಯ ಕೇಂದ್ರಗಳು ಸೇರಿದಂತೆ ಅನೇಕ ಸಂಸ್ಥೆಗಳು ಕಣ್ಗಾವಲು ವಹಿಸಿದ್ದು ವಿಶೇಷವಾಗಿ ಕಂಡುಬಂತು.