ಹೋರಿ ಹಾಯ್ದು ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಬೆಳ್ತಂಗಡಿ: ಹೋರಿ ಹಾಯ್ದು ಗಾಯಗೊಂಡ ಕಾರಣ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಯುವಕನೋರ್ವ ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತನ ಮನೆಯವರು ಪೊಲೀಸ್ ದೂರು ನೀಡಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರುಕಟ್ಟೆಯಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮುಹಮ್ಮದ್ ಶರೀಫ್ (35) ಮೃತಪಟ್ಟವರು.
ಮೇ 14 ರಂದು ರಾತ್ರಿ ಮನೆಯಲ್ಲಿ ಶರೀಫ್ ರ ಮೇಲೆ ಹೋರಿ ಹಾಯ್ದಿದೆ. ಇದರಿಂದ ಗಾಯಗೊಂಡಿದ್ದ ಅವರನ್ನು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದರಿಂದ ಶರೀಫ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು, ಬಳಿಕ ಅವರನ್ನು ಮೇ 16ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೇ 20 ರಂದು ಶರೀಫ್ ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತರ ಸಹೋದರ ನಾಸಿರುದ್ದೀನ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ ಯು.ಡಿ.ಆರ್: 28/2026, ಕಲಂ: 194(3) (iv) ಬಿ.ಎನ್.ಎಸ್.ಎಸ್. 2023ರಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಂಡ ರಚನೆ..
ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಆರೋಪಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ವೈದ್ಯಕೀಯ ತಂಡವನ್ನು ರಚಿಸುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಕೇಳಿಕೊಳ್ಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.