ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿ ಸ್ಥಾಪಿಸಲು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮನವಿ

ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿ ಸ್ಥಾಪಿಸಲು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮನವಿ

ಕಾಸರಗೋಡು: ಕೇರಳ ಸರಕಾರವು ರಾಜ್ಯವನ್ನು ಕೇಂದ್ರೀಕರಿಸಿ ಕಾಸರಗೋಡಿನಲ್ಲಿ ಪ್ರತ್ಯೇಕ ಅಸ್ತಿತ್ವವುಳ್ಳ ಕೇರಳ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಲು ಕೇರಳ ಸರಕಾರದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಕೇರಳ ರಾಜ್ಯದಲ್ಲಿ ನೆಲೆಸಿರುವ ಸರ್ವ ಕನ್ನಡಿಗರ ಹಿತ ರಕ್ಷಣೆಗಾಗಿ ಹಾಗೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಮಗ್ರವಾದ ಸಾಂಸ್ಕೃತಿಕ ಕನ್ನಡೀಕರಣ ಯೋಜನೆಯೊಂದನ್ನು ಸಿದ್ಧಪಡಿಸಿ ಮುಂದಿನ ಬಜೆಟ್‌ನಲ್ಲಿ ಕೇರಳ ಸರಕಾರವು ಕನ್ನಡ ಭಾಷೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಮೊತ್ತದ ಸಾಂಸ್ಕೃತಿಕ ನಿಧಿಯನ್ನು ಸ್ಥಾಪಿಸಿ, ಪೋಷಿಸಬೇಕೆಂದು ಮನವಿಯಲ್ಲಿ ಪ್ರಸ್ತಾವಿಸಲಾಗಿದೆ.

ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿಯನ್ನು ಸ್ಥಾಪಿಸುವ ಕುರಿತು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದ ಬಹಿರಂಗ ಅಧಿವೇಶನದಲ್ಲಿ ೭ ಬಾರಿ ನಿರ್ಣಯಗಳನ್ನು ಕೈಗೊಂಡು ಸರಕಾರದ ಸಂಬಂಧ ಪಟ್ಟವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.

ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 2026 ನವಂಬರ್ 7 ಮತ್ತು 8ರಂದು ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026 ಮತ್ತು ಕೇರಳ ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೇರಳ-ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳನ್ನು ಉದ್ಘಾಟಕರನ್ನಾಗಿ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲು ತೀರ್ಮಾನಿಸಲಾಗಿದ್ದು, ಈ ಕೇರಳ ರಾಜ್ಯ ಕನ್ನಡ ಸಮ್ಮೇಳನದಲ್ಲಿ ಕೇರಳ ಕನ್ನಡ ಅಕಾಡೆಮಿಯನ್ನು ಅಧಿಕೃತವಾಗಿ ಉದ್ಘಾಟಿಸಲು ಉದ್ದೇಶಿಸಲಾಗಿದೆ.

ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಬೇಕೆಂಬ ಪ್ರಸ್ತಾವನೆಯನ್ನು ಕೇರಳ ಸರಕಾರದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಶಿಫಾರಸು ಮಾಡುವ ಉದ್ದೇಶದಿಂದ, ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ ಉಣ್ಣಿತ್ತಾನ್, ಕಾಸರಗೋಡು ಶಾಸಕ ಕಲಟ್ರ ಮಾಹಿನ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಉದುಮ ಶಾಸಕ ಕೆ. ನೀಲಕಂಡನ್, ತ್ರಿಕ್ಕರಿಪುರ ಶಾಸಕ ಸಂದೀಪ್ ಜಿ. ವಾರಿಯಾರ್, ಕಾಇoಗಾಡ್ ಹೊಸದುರ್ಗ ಶಾಸಕ ಗೋವಿಂದನ್ ಪಳ್ಳಿ ಕಾಫಿಲ್ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಹರ್ಷಾದ್ ವರ್ಕಾಡಿ ಮತ್ತು ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆಯೆಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article