ಕರಾವಳಿಯಲ್ಲಿ ಮಳೆ ಸಿಂಚನ: ಬಿಸಿಲ ಧಗೆಯಿಂದ ಮುಕ್ತಿ, 10 ದಿನಗಳ ಕಾಲ ಮುಂದುವರಿಯಲಿದೆ ಪ್ರೀ-ಮಾನ್ಸೂನ್ ಮಳೆ

ಕರಾವಳಿಯಲ್ಲಿ ಮಳೆ ಸಿಂಚನ: ಬಿಸಿಲ ಧಗೆಯಿಂದ ಮುಕ್ತಿ, 10 ದಿನಗಳ ಕಾಲ ಮುಂದುವರಿಯಲಿದೆ ಪ್ರೀ-ಮಾನ್ಸೂನ್ ಮಳೆ

ಮಂಗಳೂರು: ಕರಾವಳಿಯ ಜನತೆ ಕಳೆದ ಒಂದು ವಾರದಿಂದ ವಿಪರೀತ ಸೆಕೆ ಮತ್ತು ಬಿಸಿಲಿನಿಂದ ತತ್ತರಿಸಿ ಹೋಗಿದ್ದು, ಗುರುವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಹಲವೆಡೆ ಮೋಡಕವಿದ ವಾತಾವರಣ ಕಂಡುಬಂದಿದ್ದು, ಮುಂಜಾನೆ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಖರ ಬಿಸಿಲಿನ ಬದಲು ತುಸು ತಂಪಾದ ಹವೆ ಕಂಡುಬಂದಿರುವುದು ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಮಳೆ ಆರಂಭವಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳು ತೋಯ್ದು ಹೋಗಿದ್ದವು. ಗುರುವಾರ ತಂಪಾದ ಗಾಳಿ ಬೀಸುತ್ತಿರುವುದರಿಂದ ಉಷ್ಣಾಂಶದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡುಬಂದಿದೆ. ಬೆಳಿಗ್ಗೆ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವವರು ತುಸು ಅಡಚಣೆ ಅನುಭವಿಸಿದರೂ, ಬಿಸಿಲಿನ ಬೇಗೆಯಿಂದ ಮುಕ್ತಿ ಸಿಕ್ಕಿದ ಖುಷಿ ಎಲ್ಲರಲ್ಲೂ ಇತ್ತು. ಗುರುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ಮಂಗಳೂರು 7.1 ಮಿ.ಮೀ, ಬಂಟ್ವಾಳ 6.2 ಮಿ.ಮೀ, ಪುತ್ತೂರು 8.6 ಮಿ.ಮೀ, ಬೆಳ್ತಂಗಡಿ 15.4 ಮಿ.ಮೀ, ಸುಳ್ಯ 6.2 ಮಿ.ಮೀ, ಕಡಬ 9 ಮಿ.ಮೀ, ಮೂಡುಬಿದಿರೆ 11.5 ಮಿ.ಮೀ ಮಳೆಯಾಗಿದೆ.

ಮುಂದಿನ 10 ದಿನ ಮಳೆ ಮುನ್ಸೂಚನೆ:

ಹವಾಮಾನ ಇಲಾಖೆಯ ಮಾಹಿತಿಯಂತೆ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಪೂರ್ವ ಮುಂಗಾರು ಮಳೆ ಮುಂದುವರಿಯುವ ಲಕ್ಷಣಗಳಿವೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹವಾಮಾನದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತ. ಮೇ 11ರ ವೇಳೆಗೆ ಉತ್ತರ ಸುಮಾತ್ರ ಕರಾವಳಿಯಲ್ಲಿ ವಾಯುಭಾರ ಕುಸಿತದ ತಿರುಗುವಿಕೆ ಆರಂಭವಾಗುವ ಲಕ್ಷಣಗಳಿವೆ. ಈ ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗಲಿದೆಯೇ ಅಥವಾ ಕೇವಲ ಮಳೆಯನ್ನು ತರಲಿದೆಯೇ ಎಂಬುದು ಮೇ 11ರ ನಂತರವಷ್ಟೇ ಸ್ಪಷ್ಟವಾಗಲಿದೆ. ಇದರ ನೇರ ಪರಿಣಾಮ ಕರಾವಳಿಯ ಮಳೆಯ ಪ್ರಮಾಣದ ಮೇಲೆ ಬೀರುವ ಸಾಧ್ಯತೆ ಇದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article