ಫಲ್ಗುಣಿ ನದಿಗೆ ತ್ಯಾಜ್ಯ, ಮಣ್ಣು ಸುರಿದು ಅತಿಕ್ರಮಣ: 10 ದಿನದೊಳಗೆ ತೆರವು

ಫಲ್ಗುಣಿ ನದಿಗೆ ತ್ಯಾಜ್ಯ, ಮಣ್ಣು ಸುರಿದು ಅತಿಕ್ರಮಣ: 10 ದಿನದೊಳಗೆ ತೆರವು


ಮಂಗಳೂರು: ಸುಲ್ತಾನ್ ಬತ್ತೇರಿಯ ಬೋಳೂರು ಪಾರ್ಕ್ ಬಳಿ ಫಲ್ಗುಣಿ ನದಿಗೆ ಕಟ್ಟಡ ತ್ಯಾಜ್ಯ ಸೇರಿದಂತೆ ಮಣ್ಣು ಸುರಿದು ಅತಿಕ್ರಮಣ ಮಾಡಿರುವುದನ್ನು ಎರಡು ಜೆಸಿಬಿಗಳ ಮೂಲಕ 10 ದಿನಗಳಲ್ಲಿ ತೆರವುಗೊಳಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು. 

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿಕ್ರಮಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ಹಾಕಿ ಅತಿಕ್ರಮಣ ತೆರವುಗೊಳಿಸುವಂತೆ ಸೂಚಿಸಲಾಗಿದ್ದರೂ ಎರಡು ಮೂರು ವಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಜಿಲ್ಲಾಡಳಿತದ ವತಿಯಿಂದಲೇ ಅತಿಕ್ರಮಣ ತೆರವು ಕಾರ್ಯವನ್ನು ಎರಡು ಜೆಸಿಬಿಗಳ ಮೂಲಕ ನಡೆಸಲಾಗುತ್ತಿದೆ. ಅದರ ವೆಚ್ಚವನ್ನು ಅತಿಕ್ರಮಣ ಮಾಡಿದವರಿಂದಲೇ ಭರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 

ಸುಲ್ತಾನ್ ಬತ್ತೇರಿ ಹಾಗೂ ತಣ್ಣೀರುಬಾವಿ ನಡುವೆ ಸೇತುವೆ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಫಲ್ಗುಣಿ ನದಿಗೆ ಹಾಕಲಾಗಿರುವ ಮಣ್ಣಿನ ಒಡ್ಡನ್ನು ತೆರವುಗೊಳಿಸುವ ಕಾರ್ಯ ಶೀಘ್ರವೇ ನಡೆಯಲಿದೆ. ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಮಳೆಗಾಲದಲ್ಲಿ ನದಿ ನೀರಿನ ಹರಿವಿಗೆ ತೊಂದರೆ ಆಗದಂತೆ ಯಾವ ರೀತಿಯಲ್ಲಿ ಕ್ರಮ ವಹಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ಜುಲೈ ೨ನೆ ವಾರದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣವಾಗಲಿದೆ ಎಂದು ತಿಳಿಸಿದರು. 

ಮಳೆಯ ಸಂದರ್ಭ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಪಂಪ್‌ವೆಲ್ ಸೇರಿದಂತೆ ಕೃತಕ ನೆರೆ ಸಂಭವಿಸುವ ಪ್ರದೇಶಗಳ ಒಳಚರಂಡಿಗಳ ಎತ್ತರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಐದು ಕಾಮಗಾರಿಗಳಲ್ಲಿ ಮೂರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವೆಡೆ ಭೂಸ್ವಾಧೀನದ ಅಗತ್ಯವಿದೆ. ರಾಜಕಾಲುವೆಗಳು ಸೇರಿದಂತೆ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿ ಮೇ 26ರೊಳಗೆ ಪೂರ್ಣಗೊಳ್ಳಲಿದೆ. ಈ ಹಿಂದೆ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರಿನ ಮೇರೆಗೆ ಈ ಬಾರಿ ಸ್ಥಳೀಯ ಆಸಕ್ತ ಜನರ ಮೇಲ್ವಿಚಾರಣೆಯೊಂದಿಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅತಿಕ್ರಮಣ ತೆರವಿಗೆ ಕ್ರಮ ರಾಷ್ಟ್ರೀಯ ಹೆದ್ದಾರಿ 66, 75, 73ರಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಎನ್‌ಎಚ್‌ಎಐಯಿಂದ ಮಾಹಿತಿ ಪಡೆಯಲಾಗಿದೆ. ಸ್ಥಳೀಯ ತಂಡಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ವಾಟರ್ ಫ್ರಂಟ್ ಯೋಜನೆ..

ನೇತ್ರಾವತಿ ಸೇತುವೆ ಸಮೀಪ ಸ್ಮಾರ್ಟ್ ಸಿಟಿ ಲಿ. ವತಿಯಿಂದ ನಿರ್ಮಾಣವಾಗುತ್ತಿರುವ ಜಲಾಭಿಮುಖ ಅಭಿವೃದ್ಧಿ ಯೋಜನೆ (ವಾಟರ್ ಫ್ರಂಟ್) ಕಾಮಗಾರಿ ಜೂನ್ 2ನೆ ವಾರದೊಳಗೆ ಪೂರ್ಣಗೊಳ್ಳಲಿದೆ. ಒಟ್ಟು 2.1 ಕಿ.ಮೀ. ವ್ಯಾಪ್ತಿ ಯ ಯೋಜನೆಯಡಿ 1.8 ಮೀಟರ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ವಾಯು ವಿಹಾರ ಪಥಕ್ಕೆ ಪ್ರವೇಶ ಹಾದಿ ಕಿರಿದಾಗಿದ್ದು, ಮಂಗಳೂರು ಕ್ಲಬ್ ಮೂಲಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಪ್ರವೇಶ ದಾರಿಗೆ ಮಾತುಕತೆ ನಡೆಸಿ ಕ್ರಮ ವಹಿಸಲಾಗುವುದು. ಪಕ್ಕದ ಹೆಂಚಿನ ಕಾರ್ಖಾನೆಯ ಮಾಲಕರು ಕೂಡಾ ಪ್ರವೇಶಕ್ಕೆ ಹಾದಿ ಒದಗಿಸಲು ಒಪ್ಪಿದ್ದು, ಕ್ರಮ ವಹಿಸಲಾಗುವುದು. ಸದ್ಯ ಕಾಮಗಾರಿ ನಡೆಯುತ್ತಿರುವ ಕಾರಣ ಉದ್ಯಾನವದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article