ಶಿಕ್ಷಣದಿಂದ ದೇಶದಲ್ಲಿಯೇ ಉನ್ನತ ಸ್ಥಾನಕ್ಕೇರಿದ ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ.
ಕೇವಲ ಮಾರ್ಕ್ಸ್ ಪಡೆಯುವುದು ಮಾತ್ರ ಶಿಕ್ಷಣವಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಯು ಪ್ರಮುಖವಾಗಿದೆ. ಪರಿಪೂರ್ಣವಾದ ಶಿಕ್ಷಣವನ್ನು ನೀಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ. ಮುಂದಿನ ವರ್ಷವೂ ಈ ಸ್ಥಾನವನ್ನು ಉಳಿಸಿಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಮಾತನಾಡಿ, ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಫಲಿತಾಂಶದಲ್ಲಿ ಉನ್ನತ ಸ್ಥಾನಕ್ಕೇರಿರುವುದು ಮಾತ್ರವಲ್ಲದೆ ಅನುತ್ತೀರ್ಣರಾಗುವವರ ಪ್ರಮಾಣವೂ ಕಡಿಮೆಯಾಗಿದೆ. ಇದೊಂದು ಟೀಂ ವರ್ಕ್ ಆಗಿದ್ದು, ಇದರಲ್ಲಿ ಪಾಲ್ಗೊಂಡವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಶಿಧರ್ ಮಾತನಾಡಿ, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27207 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 26772 ಉತ್ತೀರ್ಣ ಹಾಗೂ 435 ಅನುತ್ತೀರ್ಣರಾಗಿ ಶೇ.98.40 ಫಲಿತಾಂಶ ಬಂದಿದೆ. 349 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಈ ಪೈಕಿ 110 ಸರಕಾರಿ, 50 ಅನುದಾನಿತ ಹಾಗೂ 189 ಅನುದಾನ ರಹಿತ ಶಾಲೆಗಳಾಗಿವೆ. 826 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 523 ಶಾಲೆಗಳು ಎ ಗ್ರೇಡ್ ಪಡೆದಿದೆ ಎಂದು ತಿಳಿಸಿದರು.
ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.

