ಅಕ್ರಮವಾಗಿ ಸಾಗಿಸುತ್ತಿದ್ದ 27 ಕೋಣಗಳ ರಕ್ಷಣೆ
Sunday, May 17, 2026
ಮಂಗಳೂರು: ಜೆಪ್ಪಿನಮೊಗರು ಬಳಿ ಶನಿವಾರ ಮುಂಜಾನೆ ಈಚರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸರಿ ಸುಮಾರು 27 ಕೋಣಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜರಂಗದಳದ ಕಾರ್ಯಕರ್ತರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಕೋಣಗಳನ್ನು ಹಾವೇರಿಯಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಯಾವುದೇ ಪರವಾನಗಿ ಇಲ್ಲದೆ, ಅಮಾನವೀಯ ರೀತಿಯಲ್ಲಿ ಕೋಣಗಳನ್ನು ವಾಹನದಲ್ಲಿ ತುಂಬಿಸಲಾಗಿತ್ತು.
ರಕ್ಷಿಸಲಾದ ಜಾನುವಾರುಗಳನ್ನು ಸದ್ಯ ಸ್ಥಳೀಯ ಗೋಶಾಲೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.