ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೆರ್ನಾಲ್‌ಗೆ ಅಭಿನಂದನೆ
ಅನಿವಾಸಿ ಭಾರತೀಯ ಉದ್ಯಮಿ, ವಿಶನ್ ಕೊಂಕಣಿಯ ಅಧ್ಯಕ್ಷ ಮೈಕೆಲ್ ಡಿಸೋಜ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ, ಕವಿ ಜಯಂತ್ ಕಾಯ್ಕಿಣಿ ಉಪಸ್ಥಿತಿಯಲ್ಲಿ ಜರುಗಿದ ಸಮಾರಂಭದಲ್ಲಿ ಎಚ್.ಎಂ.ಪೆರ್ನಾಲ್‌ರನ್ನು ಅಭಿನಂದಿಸಲಾಯಿತು
ಬಳಿಕ ‘ಜೀವನ ಮತ್ತು ಸಾಹಿತ್ಯದ ಆಚರಣೆ’ ಬಗ್ಗೆ ನಡೆದ ಸಂವಾದದಲ್ಲಿ ಮಾತನಾಡಿದ ಎಚ್.ಎಂ.ಪೆರ್ನಾಲ್, ಸಾಹಿತಿಗಳ ನಡುವೆ ಕಂಪಾರ್ಟ್‌ಮೆಂಟ್ ಸಮಂಜಸವಲ್ಲ, ಸಾಹಿತ್ಯದ ಅಂತಿಮ ಗುರಿ ಮಾನವೀಯತೆ, ಸೌಹಾರ್ದ. ಆದುದರಿಂದ ಈ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ವಿಂಗಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು. ಶಕುಂತಲಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಸಂವಾದದಲ್ಲಿ ಭಾಗವಹಿಸಿದ್ದರು.
ಸಾಹಿತ್ಯ ಶೋಕಿಯಲ್ಲ, ಸಂವಾದ..
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಜಯಂತ್ ಕಾಯ್ಕಿಣಿ ಮಾತನಾಡಿ, ಸಾಹಿತ್ಯ ಎಂದರೆ ಶೋಕಿ ಅಲ್ಲ. ಸಾಹಿತ್ಯ ಸಮಾಜದ ಜನರ ನಡುವಿನ ಒಂದು ಸಂವಾದ, ಮುಂದಿನ ದಿನಗಳ ನೈಜ ದಾಖಲಾತಿ. ಎಚ್.ಎಂ. ಪೆರ್ನಾಲ್ರದ್ದು ಜೀವಸತ್ವವನ್ನು ಒಳಗೊಂಡ ಸಾಹಿತ್ಯ ಎಂದು ಹೇಳಿದರು.
ಪೆರ್ನಾಲ್ ವ್ಯಂಗಚಿತ್ರಕಾರ, ವಿಮರ್ಶಕ, ಕವಿ, ಕತೆಗಾರ ಸೇರಿದಂತೆ ಸಾಹಿತ್ಯದ ಹಲವು ಮುಖಗಳ ಬಗ್ಗೆ ಅಭಿರುಚಿ ಹೊಂದಿರುವ ವ್ಯಕ್ತಿ. ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಮಹತ್ವ ಎಚ್.ಎಂ. ಪೆರ್ನಾಲ್ರ ಸಾಹಿತ್ಯದ ಮುಖ್ಯ ಸತ್ವ ಎಂದವರು ಅಭಿಪ್ರಾಯಿಸಿದರು.
ಬಳಿಕ ಉಸ್ತಾದ್ ರಫೀಕ್ ಖಾನ್ ಮತ್ತು ಸಂಗಡಿಗರಿಂದ ‘ಸಿತಾರ್ ಫ್ಯೂಷನ್’ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ರಾಜೇಶ್ ಭಾಗವತ್(ತಬಲಾ), ವಾಮನ್ ಕಾರ್ಕಳ(ಲಯ) ಸಹಕರಿಸಿದರು.
ಎಡ್ಡಿ ಸಿಕೇರ್ ಮತ್ತು ಮುಹಮ್ಮದ್ ಮುಅದ್ ಜಿ.ಎಂ. ಅವರಿಂದ ಎಚ್.ಎಂ.ಪೆರ್ನಾಲ್ರ ಕವಿತೆಗಳ ವಾಚನ ಕವಿತಾ ಸಂಭ್ರಮ ಕಾರ್ಯಕ್ರಮ ನಡೆಯಿತು.
ಎಚ್ ಎಂ.ಪೆರ್ನಾಲ್‌ರನ್ನು ಸನ್ಮಾನ ಸಮಿತಿಯ ಅಧ್ಯಕ್ಷ ಮೈಕೆಲ್ ಡಿಸೋಜ, ಸದಸ್ಯರಾದ ಫಾ.ಡಾ.ಪ್ರವೀಣ್ ಮಾರ್ಟಿಸ್, ಫಾ.ಡೆನ್ನಿಸ್ ಡೇಸಾ, ಫಾ.ವಾಲ್ಟರ್ ಡಿಸೋಜ, ಫಾ.ಜೆರೋಮ್ ಮೊಂತೆರೊ, ನಂದಗೋಪಾಲ್ ಶೆಣೈ, ಅನಿಲ್ ಲೋಬೊ, ನವೀನ್ ಆರ್. ಡಿಸೋಜ, ಡಾ.ಪೂರ್ಣಾನಂದಾಚಾರಿ, ಚೇತನ್ ಆಚಾರ್ಯ, ಆನಂದ್ ಜಿ. ಕಾಮತ್, ಕಿಶೋರ್ ಗೊನ್ಸಾಲ್ವಿಸ್, ಶಕುಂತಲಾ ಆರ್. ಕಿಣಿ, ಓಸ್ವಾಲ್ಡ್ ರೊಡ್ರಿಗಸ್, ಸ್ಟೀಫನ್ ಪಿಂಟೊ, ಸಿಎ ಲಿಯೋ ನೆಲ್ ಅರಾನ್ಹ, ವಿಲ್ಸನ್ ಕಟೀಲ್, ಸ್ಟ್ಯಾನಿ ಬೇಲಾ, ಎಡ್ಡಿ ಸಿಕ್ವೇರ ಅವರು ಗೌರವಿಸಿ ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶನ್ ಕೊಂಕಣಿಯ ಅಧ್ಯಕ್ಷ ಮೈಕೆಲ್ ಡಿಸೋಜ ಮಾತನಾಡಿ, ಎಚ್.ಎಂ.ಪೆರ್ನಾಲ್ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಗಳಿಸುವ ಮೂಲಕ ಕೊಂಕಣಿ ಭಾಷೆ, ಸಮಾಜಕ್ಕೆ ಗೌರವ ತಂದು ಕೊಟ್ಟಿದ್ದಾರೆ. ಪೆರ್ನಾಲ್ 40 ವರ್ಷಗಳಿಂದ ಮಹತ್ವದ ಕೊಡಗೆ ನೀಡಿದ್ದಾರೆ. ಅವರು ಇನ್ನಷ್ಟು ಸಾಧನೆ ಮಾಡಲಿ ಎಂದರು.
ಟೈಟಸ್ ನೊರೊನ್ಹಾ ಸನ್ಮಾನಿತರನ್ನು ಪರಿಚಯಿಸಿದರು. ಸಂಭ್ರಮಾಚರಣೆ ಸಮಿತಿಯ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ವಂದಿಸಿದರು.