ಮೇ 29 ರಿಂದ 31 ರವರೆಗೆ ತಣ್ಣೀರು ಬಾವಿ ಬೀಚ್‌ನಲ್ಲಿ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ
ಜಿಲ್ಲಾ ಪಂಚಾಯತ್‌ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ‘ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಸರ್ಫಿಂಗ್ ಕ್ರೀಡೆಯು ಮೊದಲ ಬಾರಿಗೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸರ್ಫಿಂಗ್ ತಂಡದಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಗಳಾಗಿರುವ ದೇಶದ ಉನ್ನತ ಸರ್ಫಿಂಗ್ ಪಟುಗಳಿಗೆ ಮಂಗಳೂರಿನಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್ಶಿಪ್ ಅತ್ಯಂತ ನಿರ್ಣಾಯಕ ವೇದಿಕೆಯಾಗಲಿದೆ ಇತ್ತೀಚೆಗಷ್ಟೇ ಭಾರತೀಯ ಸರ್ಫಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತಾ ಕೋಟಾವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆಯಲಿರುವ ಈ ಮೆಗಾ ಟೂರ್ನಮೆಂಟ್‌ಗೆ ನವ ಮಂಗಳೂರು ಬಂದರು ಪ್ರಾಧಿಕಾರ ಸತತ ಮೂರನೇ ವರ್ಷವೂ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇದರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡುತ್ತಿವೆ
ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ..
“ಕರ್ನಾಟಕ ಸರ್ಕಾರವು ಸತತ 7 ವರ್ಷಗಳಿಂದ ಈ ವಿಶಿಷ್ಟ ಕ್ರೀಡೆಗೆ ಸರಣಿ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕರಾವಳಿ ಕ್ರೀಡೆ ಹಾಗೂ ಪ್ರವಾಸೋದ್ಯಮದ ದೀರ್ಘಾವಧಿ ಬೆಳವಣಿಗೆಗೆ ಬದ್ಧವಾಗಿದೆ. ಮಂಗಳೂರು ಈಗ ಕೇವಲ ಧಾರ್ಮಿಕ ಪ್ರವಾಸೋದ್ಯಮಕ್ಕಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಬೀಚ್ ಪ್ರವಾಸೋದ್ಯಮ ಮತ್ತು ಸರ್ಫಿಂಗ್ ಹಬ್ ಆಗಿ ಗುರುತಿಸಿಕೊಳ್ಳುತ್ತಿದೆ. ಏಪ್ರಿಲ್‌ನಲ್ಲಿ ನಡೆದ ಲಿಟಲ್ ಅಂಡಮಾನ್ ಪ್ರೊ ೨೦೨೬ರ ಬಳಿಕ, ಇದು ರಾಷ್ಟ್ರೀಯ ಸರಣಿಯ ಎರಡನೇ ಪ್ರಮುಖ ನಿಲ್ದಾಣವಾಗಿದ್ದು, ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳ ಶ್ರೇಷ್ಠ ಕ್ರೀಡಾಪಟುಗಳು ಇಲ್ಲಿ ಕಡುವೈರತ್ವದ ಪ್ರದರ್ಶನ ನೀಡಲಿದ್ದಾರೆ,” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಸರ್ಫಿಂಗ್ ಮೇಳದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಫಿಂಗ್ ಅಸೋಸಿಯೇಶನ್‌ನ ಶಮಂತ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ ಶೆಟ್ಟಿ, ಜಿ. ಪಂ. ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ಯುವ ಸಬಲೀಕರಣ ಇಲಾಖೆಯ ಪ್ರದೀಪ್ ಡಿ. ಸೋಜಾ, ಪ್ರವಾಸೋದ್ಯಮ ಇಲಾಖೆಯ ದಿಲೀಪ್ ಕುಮಾರ್ ಹಾಗೂ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.