35 ಲಕ್ಷ ಮೌಲ್ಯದ ಗಾಂಜಾ ಮಾರಾಟ: ಬಿಸಿಎ ವಿದ್ಯಾರ್ಥಿನಿ ಸೆರೆ
ಬಂಧಿತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ಮೂಲದ, ಪ್ರಸ್ತುತ ಕುಂದಾಪುರ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನ (21) ಎಂದು ಗುರುತಿಸಲಾಗಿದೆ.
ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ನಡೆಸಿದ ಮಂಗಳವಾರ ಕಾರ್ಯಾಚರಣೆಯಲ್ಲಿ ಆರೋಪಿ ಯುವತಿಯಿಂದ ಸುಮಾರು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಆರೋಪಿ ಯುವತಿಯು ಚೆನ್ನೈಯಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸುಹಾನ ವಿರುದ್ಧ ಈ ಹಿಂದೆಯೂ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.37/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 22(C) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿಯೂ O.R. No.177/2025-26ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 26 U/S 20(b), 2(B), 23(b), 27(A) & 29 ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ.