ಮಾರ್ಗದಲ್ಲಿ ಕುಳಿತು ಟೀಕಿಸುವ ಬದಲು ಚರ್ಚಿಸಿ: ಯು.ಟಿ. ಖಾದರ್ ಫರೀದ್
ಅವರು ಇಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ಎಲ್ಲಾ ಸಮಸ್ಯೆಗಳನ್ನು ಸರಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಆರೋಗ್ಯ ಶಿಕ್ಷಣ, ಹೌಸಿಂಗ್‌ನಲ್ಲಿ ಸರಕಾರವು ಖಾಸಗಿಯವರ ಸಹಭಾಗಿತ್ವದಲ್ಲಿ ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯದ ಆರೋಗ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅನುಷ್ಠಾನಗೊಳಿಸಿರುವ ‘ಪುನೀತ್ ಹೃದಯಜ್ಯೋತಿ’ ಯೋಜನೆಯನ್ನು ಶೀಘ್ರವೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡಲಾಗುವುದು ರಾಜ್ಯದಲ್ಲಿ ಒಟ್ಟು 78 ಪುನೀತ್ ಹೃದಯ ಜ್ಯೋತಿ ಕೇಂದ್ರಗಳು ರೋಗಿಗಳ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುತ್ತಿವೆ. ದ.ಕ. ಜಿಲ್ಲೆಯಲ್ಲೂ ಮೂರು ಕೇಂದ್ರಗಳಿದ್ದು, ಇವುಗಳ ಮೂಲಕ ಈ ವರ್ಷ 450 ಜೀವ ಉಳಿಸುವ ಕಾರ್ಯವಾಗಿದೆ ಎಂದು ಹೇಳಿದರು.
ಹಠಾತ್ ಹೃದಯಾಘಾತದ ನಂತರದ ನಿರ್ಣಾಯಕ ಅವಧಿಯಲ್ಲಿ ತ್ವರಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ನೀಡಲಾಗುವ ಟೆನೆಕ್ಟೆಪ್ಲೇಸ್ ಎಂಬ ದುಬಾರಿ ಇಂಜೆಕ್ಷನ್‌ನ್ನು ಸರಕಾರದಿಂದ ಉಚಿತವಾಗಿ ನೀಡುವ ಜತೆಗೆ ಅಗ್ಯ ಶಸ್ತ್ರ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದರು.
ಎಂಡೋ ಸಂತ್ರಸ್ತರಿಗೆ ಹೆಚ್ಚುವರಿ 4 ಪಾಲನಾ ಕೇಂದ್ರಗಳು:
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೇವೆ ನೀಡಲು ಸದ್ಯ ಎರಡು ಪಾಲನಾ ಕೇಂದ್ರಗಳಿವೆ. ಕಳೆದ ಆರು ವರ್ಷಗಳಿಂದ ಹೆಚ್ಚುವರಿ ಪಾಲನಾ ಕೇಂದ್ರಗಳ ಬೇಡಿಕೆಯಂತೆ ಸರಕಾರ 4 ಹೆಚ್ಚುವರಿ ಪಾಲನಾ ಕೇಂದ್ರಗಳನ್ನು ಪುತ್ತೂರು ತಾಲೂಕಿನ ಪಾಣಾಜೆ, ಬೆಳ್ತಂಗಡಿಯ ಕಣಿಯೂರು, ಬಂಟ್ವಾಳದ ವಿಟ್ಲ ಹಾಗೂ ಸುಳ್ಯದ ಬೆಳ್ಳಾರೆಯಲ್ಲಿ ಮಂಜೂರು ಮಾಡಿದೆ. 2026-27ನೆ ಸಾಲಿಗೆ ಈ ಹೊಸ ನಾಲ್ಕು ಪಾಲನಾ ಕೇಂದ್ರಗಳ ನಿರ್ವಹಣೆಗೆ 1.26 ಕೋಟಿ ರೂ. ಅನುದಾನವನ್ನು ಸರಕಾರ ಮೀಸಲಿಟ್ಟಿದ್ದು, ಜೂ. 1ರಿಂದ ಈ ಕೇಂದ್ರಗಳು ಕಾರ್ಯಾರಂಭಿಸಲಿವೆ ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಸಮಸ್ಯೆ ಇದ್ದರೆ ಬಂದು ಚರ್ಚಿಸಿ-ಟೀಕೆ ಬೇಡ:
ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮತ್ತು ನುರಿತ ತಜ್ಞ ವೈದ್ಯರ ಸೇವೆಯನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ತಾಲೂಕು ಆಸ್ಪ್ರತ್ರೆ ಬಂಟ್ವಾಳ ಎಜೆ ವೈದ್ಯಕೀಯ ಕಾಲೇಜಿನೊಂದಿಗೆ, ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ ಆಳ್ವಾಸ್ ವೈದ್ಯಕೀಯ ಕಾಲೇಜಿನ ಜತೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಟ್ಲವನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಜತೆ ಒಡಂಬಡಿಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆಯಾದ ನಂತರ ಬಂಟ್ವಾಳದಲ್ಲಿ ಉಚಿತವಾಗಿ ಎರಡು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಜನರಿಗೆ ಯಾವ ರೀತಿಯಲ್ಲೂ ತೊಂದರೆ ಇಲ್ಲದಾಗ ಯಾವ ವಿಷಯಕ್ಕೆ ಕೆಲವರು ಈ ಬಗ್ಗೆ ವಿರೋಧ, ಟೀಕೆ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಮಾಹಿತಿ ಕೊರತೆ ಇದ್ದಲ್ಲಿ ಬಂದು ಚರ್ಚಿಸಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿದ್ಯುತ್ ಸರಬರಾಜು ಕಂಪನಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕಿಲ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಎಂಆರ್‌ಪಿಎಲ್‌ನ ಪ್ರಕಾಶ್ ಶಂಕರ್, ಪ್ರಶಾಂತ್ ಬಾಳಿಗ, ಕೆಎಂಸಿ ಡೀನ್ ಉನ್ನಿಕೃಷ್ಣನ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಸ್ವಾಗತಿಸಿದರು. ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.