ಮೂರು ಕ್ಲಿನಿಕ್, ಒಂದು ವಕೀಲರ ಕಚೇರಿಗೆ ನುಗ್ಗಿ ಕಳವು

ಮೂರು ಕ್ಲಿನಿಕ್, ಒಂದು ವಕೀಲರ ಕಚೇರಿಗೆ ನುಗ್ಗಿ ಕಳವು

ಮಂಗಳೂರು: ಇಲ್ಲಿನ ಪೇಟೆಯ ಹೃದಯ ಭಾಗದಲ್ಲಿರುವ ಮೂರು ವೈದ್ಯರ ಕ್ಲಿನಿಕ್‌ಗಳಿಗೆ ಹಾಗೂ ಒಂದು ವಕೀಲರ ಕಚೇರಿಗೆ ನುಗ್ಗಿದ ಕಳ್ಳರು ಒಟ್ಟು 71,500 ರೂ. ನಗದು ಹಣವನ್ನು ದೋಚಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿಯ ಖ್ಯಾತ ಮಕ್ಕಳ ತಜ್ಞ ಡಾ. ಎಂ.ಎನ್. ಭಟ್ ಅವರ ಕ್ಲಿನಿಕ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕ್ಲಿನಿಕ್‌ನೊಳಗಿದ್ದ 55000 ರೂ. ನಗದನ್ನು  ದೋಚಿದ್ದಾರೆ. ಕ್ಲಿನಿಕ್‌ಗೆ ಶನಿವಾರ ರಜಾ ದಿನವಾಗಿದ್ದರಿಂದ ಕಳವು ಕೃತ್ಯ ಶನಿವಾರ ಸಾಯಂಕಾಲದ ವೇಳೆ ಗಮನಕ್ಕೆ ಬಂದಿತ್ತು.

ಇದೇ ಕಟ್ಟಡದ ಮುಂಭಾಗದ ಕಟ್ಟಡದಲ್ಲಿದ್ದ ಡಾ. ಗೋವಿಂದ ಪ್ರಸಾದ್ ಕಜೆಯವರ ಕ್ಲಿನಿಕ್‌ನ ಒಂದು ಬೀಗವನ್ನು ಮುರಿದ ಕಳ್ಳರು ಇನ್ನೊಂದು ಬೀಗವನ್ನು ತೆಗೆಯಲು  ಸಾಧ್ಯವಾಗದೆ ಹಿಂದಿರುಗಿದ್ದಾರೆ. ಅದೇ ಕಟ್ಟಡದಲ್ಲಿರುವ ಡಾ. ರಾಜಾರಾಮ ಕೆ.ಬಿ. ಅವರ ದಂತ ಚಿಕಿತ್ಸಾಲಯಕ್ಕೆ ನುಗ್ಗಿದ ಕಳ್ಳರು ಹಣಕ್ಕಾಗಿ ವೈದ್ಯರ ಟೇಬಲ್‌ನ ಡ್ರಾಯರ್ ಅನ್ನು ಮುರಿದಿದ್ದು, ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಅಲ್ಲಿ ಹಣವಿಲ್ಲದೆ ಕಳವು ಯತ್ನದಲ್ಲಿ ವಿಫಲರಾಗಿದ್ದಾರೆ. 

ಸನಿಹದಲ್ಲೇ ಇದ್ದ ಅರವಿಂದ ಭಂಡಾರಿ ಎಂಬ ನೋಟರಿ ವಕೀಲರ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯಲ್ಲಿದ್ದ 16,500 ರೂ. ಹಣವನ್ನು ಎಗರಿಸಿದ್ದಾರೆ. 

ಶುಕ್ರವಾರದಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯ ಮನೆಗೆ ನುಗ್ಗಿ 15.80 ಲಕ್ಷ ರೂ. ಮೌಲ್ಯದ ನಗ-ನಗದನ್ನು ದೋಚಿದ ಕಳ್ಳತನದ ಬೆನ್ನಲ್ಲೇ ಉಪ್ಪಿನಂಗಡಿ ಪೇಟೆಯಲ್ಲೇ ನಾಲ್ಕು ಕಡೆಗಳಲ್ಲಿ ಕಳ್ಳತನ ನಡೆದಿರುವುದು ನಾಗರಿಕ ವಲಯದಲ್ಲಿ ಕಳವಳ ಮೂಡಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article