ಮಕ್ಕಳಿಗೆ ತಳಮಟ್ಟದ ಕೃಷಿ ಅಧ್ಯಯನ
ಮಂಗಳೂರು: ಉಳ್ಳಾಲದ ಉಳ್ಳಾಲಬೈಲಿನ ದಕ್ಷ್ ಪ್ಲೇಸ್ಕೂಲ್ ಮತ್ತು ಫುಡ್‌ಚೈನ್ ಕ್ಯಾಂಪೇನ್ (ಕೆವಿಕೆ) ಮಂಗಳೂರು ಪಾಲುದಾರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮಕ್ಕಳಿಗೆ ಕೃಷಿಯ ಬಗ್ಗೆ ತಳಮಟ್ಟದ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ.
ಚಿಕ್ಕ ಮಕ್ಕಳಿಗೆ ಮಾನಸಿಕ, ಬೌದ್ಧಿಕ ಬೆಳವಣಿಗೆ, ಸುರಕ್ಷತೆ, ಪೋಷಣೆ ಮುಂತಾದ ಉತ್ತೇಜಕ ವಾತಾವರಣ ಕಲ್ಪಿಸಲು ದಕ್ಷ್ ಪ್ಲೇ ಸ್ಕೂಲ್ ನೆಲೆಗೊಂಡಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಶಾಲೆಯ ನರ್ಸರಿ, ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪರಿಸರದ ಜೊತೆಗಿನ ಒಡನಾಟವನ್ನು ಹೇಳಿಕೊಡಲಿದ್ದೇವೆ. ಇಂದಿನ ಮೊಬೈಲ್ ಜಮಾನದಲ್ಲಿ ಮಕ್ಕಳು ಮಣ್ಣಿನ ಜೊತೆ, ಕೃಷಿಯ ಜೊತೆ ಬೆಳೆಯಬೇಕು. ಅವರ ವಯಸ್ಸಿಗೆ ತಕ್ಕಂತೆ ಕೃಷಿಯ ಅನುಭವ ಅವರಿಗೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ದಕ್ಷ್ ಪ್ಲೇಸ್ಕೂಲ್ ಸ್ಥಾಪಕಿ, ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಉಳ್ಳಾಲಬೈಲು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವಾರ ಗಿಡ ನೆಡುವುದು ಸಹಿತ ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುವುದು. ಪರಿಸರ ಪ್ರೇಮಿಗಳು ನಮಗೆ ಸಹಕಾರ ನೀಡಲಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ತಕ್ಕಂತೆ ಕೃಷಿ ಅಧ್ಯಯನ ನಡೆಸಿಕೊಡಲು-ಡ್‌ಚೈನ್ ಕ್ಯಾಂಪೇನ್ ಒಪ್ಪಿಕೊಂಡಿದೆ ಎಂದರು.
ಫುಡ್ ಚೈನ್‌ನ ಯತೀಶ್ ತುಕಾರಾಂ, ಯಕ್ಷಗಾನ ಗುರು ಆಶ್ವತ್ಥ್ ಮಂಜನಾಡಿ, ರೋಶನಿ ನಿಲಯ ಪ್ರಾಧ್ಯಾಪಕ ಸಂದೀಪ್ ಉಳ್ಳಾಲ್, ಪರಿಸರ ಸಂರಕ್ಷಕ ಮಾಧವ ಉಳ್ಳಾಲ್, ಪ್ರಮುಖರಾದ ಶಿಲ್ಪ ರಾಕೇಶ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.