ರೇಷ್ಮೆ ಬೆಳೆ-ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ಕೆ. ವೆಂಕಟೇಶ್

ರೇಷ್ಮೆ ಬೆಳೆ-ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ಕೆ. ವೆಂಕಟೇಶ್


ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಹೆಚ್ಚಿಸಲು  ವಿಶೇಷ ಆದ್ಯತೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಅವರು ಬುಧವಾರ ರೇಷ್ಮೆ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ  ವಿಟ್ಲದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರೇಸ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು.


30 ವರ್ಷಗಳ ಹಿಂದಿನವರೆಗೂ ಕರಾವಳಿ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ  ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಪ್ರಸ್ತುತ ಈ ಭಾಗದಲ್ಲಿ ಅಡಿಕೆ ಬೆಳೆ ಕಡಿಮೆಯಾಗುತ್ತಿರುವುದರಿಂದ ಪರ್ಯಾಯವಾಗಿ ರೇಷ್ಮೆ ಬೆಳೆಗೆ ಒತ್ತು ನೀಡಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರಿಗೆ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು.  ಉಚಿತ ಸಸಿ ವಿತರಣೆ, ಸಲಕರಣೆ, ಗೊಬ್ಬರ ಹಾಗೂ ಸಬ್ಸಿಡಿ ನೆರವು ಸೇರಿದಂತೆ  ಅಗತ್ಯ ಸೌಲಭ್ಯಗಳನ್ನು ರೇಷ್ಮೆ ಇಲಾಖೆಯಿಂದ  ಒದಗಿಸಲಾಗುವುದು ಎಂದು ತಿಳಿಸಿದರು.


ಹಿಂದಿನ ರೇಷ್ಮೆ ಕೃಷಿ ಪದ್ಧತಿಗೂ  ಈಗಿನ ರೇಷ್ಮೆ  ಕೃಷಿ ಪದ್ಧತಿಗೂ  ಬಹಳ ವ್ಯತ್ಯಾಸವಿದೆ. ಪ್ರಸ್ತುತ ರೇಷ್ಮೆ ಕೃಷಿ ತಾಂತ್ರಿಕ ನೆರವಿನಿಂದ ಸರಳವಾಗಿ ಮಾಡಬಹುದಾಗಿದೆ. ದಕ್ಷಿಣ ಕನ್ನಡ ಮತ್ತು  ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡಲು ಮುಂದೆ ಬರುವವರಿಗೆ ತಾಂತ್ರಿಕ ನೆರವು ಕೂಡ ಒದಗಿಸಲಾಗುವುದು ಎಂದರು.

ಕರ್ನಾಟಕದಲ್ಲಿ ರೇಸ್ಮೆ ಪ್ರಮುಖ ಬೆಳೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದೆ.  ಅಗತ್ಯ ಇರುವ ಕಡೆಗೆ ರೇಷ್ಮೆ ಖರೀದಿ ಕೇಂದ್ರ ಮತ್ತು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು. ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ಖರೀದಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೈತರಿಗೆ ರೇಷ್ಮೆಯನ್ನು ಮಾರುಕಟ್ಟೆಗೆ  ಸಾಗಿಸಲು ಸಾಗಾಣಿಕೆ ವೆಚ್ಚ 1 ಕೆಜಿಗೆ  ರೂ. 30 ರಂತೆ ನೀಡಲಾಗುತ್ತಿದೆ ಎಂದು  ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳನ್ನು ಮತ್ತು ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಲಾಗುವುದು ಎಂದು ಅವರು ಹಿಂದೆ  ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿತ್ತು. ಈಗ ಭಾರತವು ಮೊದಲ ಸ್ಥಾನಕ್ಕೇರಿದೆ. ಮೈಸೂರು ಸಿಲ್ಕ್ ಸೀರಿಗೆ  ವಿಶ್ವದಲ್ಲಿ ಅತ್ಯುತ್ತಮ ಬೇಡಿಕೆ ಇದ್ದು, ಬೇಡಿಕೆಯಷ್ಟು ಸೀರೆ  ಪೂರೈಸಲಾಗದ ಪರಿಸ್ಥಿತಿ ಇದೆ ಎಂದು ಹೇಳಿದರು.

ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ  ಪ್ರತೀ ಕೆ.ಜಿ ರೂ.600 ರಿಂದ 700 ರವರೆಗೆ ದರವಿದ್ದು, ಬೆಳೆಗಾರರು ಕೆ.ಜಿ ಗೆ ರೂ.300 ರಂತೆ ಲಾಭ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ರೇಷ್ಮೆ ಕೃಷಿಯತ್ತ ಗಮನಹರಿಸಬೇಕು ಎಂದು ಸಚಿವರು ತಿಳಿಸಿದರು.

ರೇಸ್‌ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ ಬಿ.ಆರ್. ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 50 ಎಕರೆಯಷ್ಟು ರೇಸ್ಮೆ ಕೃಷಿ ಮಾಡುವ  ಗುರಿ ಇಟ್ಟುಕೊಳ್ಳಲಾಗಿದೆ. ರೇಷ್ಮೆ ಶೆಡ್ ನಿರ್ಮಿಸಲು ಗರಿಷ್ಠ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಇದಲ್ಲದೆ ಅಗತ್ಯ ಸಲಕರಣೆ ಮತ್ತು ಯಂತ್ರಗಳನ್ನು ಸಬ್ಸಿಡಿಯಲ್ಲಿ ಒದಗಿಸಲಾಗುವುದು  ಎಂದು ತಿಳಿಸಿದರು.

ಪತ್ರಕರ್ತ ಡಾ.ಯು.ಪಿ ಶಿವಾನಂದ, ಜಿಲ್ಲಾ ರೈತರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ  ವ್ಯವಸ್ಥಾಪಕ ನಿರ್ದೇಶಕ  ಪ್ರಸಾದ್ ಶೆಟ್ಟಿ, ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರೀತಮ್ ಸೀಕ್ವೇರಾ ಉಪಸ್ಥಿತರಿದ್ದರು.

ಈ ಸಂದರ್ಭ ಹಿರಿಯ ರೇಷ್ಮೆ ಬೆಳೆಗಾರರಿಗೆ ಸನ್ಮಾನಿಸಲಾಯಿತು. ಹಾಗೂ ಬೆಳೆಗಾರರಿಗೆ ಸಬ್ಸಿಡಿ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article