ಭಾರತ ಸರ್ಕಾರದ ಅಟಲ್ ಪಿಂಚಣಿ ಯೋಜನೆ: ಎಸ್‌ಸಿಡಿಸಿಸಿ ಬ್ಯಾಂಕಿಗೆ ಸತತ ಐದನೇ ಬಾರಿ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್‌ಸಿಡಿಸಿಸಿ ಬ್ಯಾಂಕ್ 2019ರ ಜನವರಿ 11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ಅದರಂತೆ ಬ್ಯಾಂಕಿನ ಪ್ರತಿ ಶಾಖೆಯಲ್ಲೂ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರನ್ನು ನೊಂದಾಯಿಸುವ ಗುರಿಯನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ.
2025-26ನೇ ಸಾಲಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿ ಶಾಖೆಗೆ 20 ಚಂದಾದಾರರ ದಾಖಲಾತಿಯನ್ನು ನೀಡಿದ್ದು, ಅದರಂತೆ ಬ್ಯಾಂಕ್ ತನ್ನ 113 ಶಾಖೆಗಳಿಗೆ ಒಟ್ಟು 2260 ಚಂದಾದಾರರನ್ನು ನೊಂದಾಯಿಸುವ ಗುರಿ ನೀಡಿತ್ತು. ಆದರೆ, ಬ್ಯಾಂಕ್ ತನ್ನ ಎಲ್ಲಾ ಶಾಖೆಗಳ ಮುಖಾಂತರ ಒಟ್ಟು 3790 ಚಂದಾದಾರರನ್ನು ನೊಂದಾಯಿಸಿ ಗುರಿ ಮೀರಿದ ಸಾಧನೆ ಮಾಡಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಸಾಮೂಹಿಕ ಪ್ರಯತ್ನ ಮತ್ತು ಅನುಕರಣೀಯ ಕಾರ್ಯನಿರ್ವಹಣೆಯಿಂದಾಗಿ ಅಟಲ್ ಪಿಂಚಣಿ ಯೋಜನೆಯಲ್ಲಿ ನಿಗದಿಪಡಿಸಲಾದ ವಾರ್ಷಿಕ ದಾಖಲಾತಿ ಗುರಿಯನ್ನು ಸಾಧಿಸಿದ್ದಕ್ಕಾಗಿ ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿ, ಎಪಿವೈ ವಾರ್ಷಿಕ ಪ್ರಶಸ್ತಿಯನ್ನು ನೀಡಿದೆ.
ಗಣನೀಯ ಪ್ರಗತಿ:
2019-20 ರಿಂದ 2025-26ನೇ ಹಣಕಾಸು ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರನ್ನು ನೋಂದಾಯಿಸುವಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಇದುವರೆಗೆ ಒಟ್ಟು 16564 ಎಪಿವೈ ಚಂದಾದಾರರ ನೋಂದಣಿಯೊಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆ ನಿರ್ಮಿಸಿದೆ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ದಕ್ಷ ಮುಂದಾಳತ್ವದಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಬ್ಯಾಂಕ್ ಸತತ ಐದು (2021-22ರಿಂದ 2025-26ರವರೆಗೆ) ವರ್ಷಗಳಿಂದ ಪಡೆದಿರುವುದು ಗಮನಾರ್ಹ ಸಾಧನೆ.
ಈಚೆಗೆ ನವದೆಹಲಿಯಲ್ಲಿ ನಡೆದ ‘ಎಪಿವೈ ವಾರ್ಷಿಕ ಪ್ರಶಸ್ತಿ’ ವಿತರಣಾ ಸಮಾರಂಭದಲ್ಲಿ ಭಾರತ ಸರಕಾರದ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜ್, ವಿಶೇಷ ಕಾರ್ಯದರ್ಶಿ ಸಂಜಯ ಲೋಹಿಯಾ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪೂರ್ಣಾವಧಿ ಸದಸ್ಯೆ ಮಮತಾ ಶಂಕರ್, ಕಾರ್ಯನಿರ್ವಾಹಕ ನಿರ್ದೇಶಕಿ ಸುಮಿತಾ ಕೌರ್ ಕಪೂರ್ ಹಾಗೂ ಮುಖ್ಯ ಮಹಾಪ್ರಬಂಧಕ ಪ್ರವೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಉಪ ಮಹಾಪ್ರಬಂಧಕಿಯರಾದ ಶರ್ಮಿಳಾ ಗಡಿಯಾರ್ ಮತ್ತು ವಿದ್ಯಾ ಕಾರ್ನಾಡ್ ಅವರು ಎಪಿವೈ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಈ ಪ್ರಶಸ್ತಿಯನ್ನು ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.