ಭಾಷಾ ಶ್ರೇಷ್ಠತೆಯನ್ನು ಓದಿನಿಂದ ಸಾಧಿಸಲು ಸಾಧ್ಯ: ಪ್ರೊ. ಗಣಪತಿ ಗೌಡ
ನಗರದ ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್ ವಿಭಾಗದ ಭಾಷಾ ಸಂಘ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ರವೀಂದ್ರನಾಥ ಟ್ಯಾಗೋರ್ ಮತ್ತು ವಿಲಿಯಂ ಶೇಕ್ಸ್ಪಿಯರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಶಿವರಾಮ ಕಾರಂತ ಸಭಾಂಗಣದಲ್ಲಿ ಕಾವ್ಯ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಂತರ ಓದುವಿಕೆ, ಕೇಳುವಿಕೆಯನ್ನು ಅಭ್ಯಾಸ ಮಾಡುತ್ತಾ, ಮಾತು ಬರವಣಿಗೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಆಂಗ್ಲ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಧ್ಯ. ಇಂದು ರವೀಂದ್ರನಾಥ ಟ್ಯಾಗೋರ್ ಹಾಗೂ ವಿಲಿಯಂ ಶೇಕ್ಸ್ಪಿಯರ್ ಇಬ್ಬರು ಕವಿಗಳ ಜನ್ಮ ದಿನಾಚರಣೆಗಳನ್ನು ಜಂಟಿಯಾಗಿ ಆಚರಿಸುತ್ತಿರುವುದು ಪೂರ್ವ ಮತ್ತು ಪಾಶ್ಚಿಮಾತ್ಯ ಸಂಪ್ರದಾಯಗಳ ಕಾಲಾತೀತ ಕಾವ್ಯ ಪರಂಪರೆಗೆ ದೊಡ್ಡ ಗೌರವ ನೀಡಿದಂತಾಗುತ್ತದೆ ಎಂದರು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಿನ್ನಲೆ ಇರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಯಾವಾಗಲೂ ಕಷ್ಟಕರ ಎನಿಸುತ್ತದೆ. ಅಲ್ಲದೇ, ಸಂವಹನ ಕೌಶಲ್ಯದ ಕೊರತೆ ಕಾರಣದಿಂದಲೂ ಇಂಗ್ಲಿಷ್ ಭಾಷೆ ಕಠಿಣವೆನಿಸುತ್ತದೆ. ಎಐ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಬಲ್ಯ ಸಾಧಿಸಿರುವುದರಿಂದ ವಾಕ್ಯ ರಚನೆ, ಅನುವಾದ ಸುಲಭವಾಗಿಸಿದೆ. ಆದರೆ, ಎಐ ವಿಷಯದೊಳಗಿನ ಭಾವವನ್ನು ಗಮನಿಸುವುದಿಲ್ಲ, ಕೇವಲ ಭಾಷೆಗೆ ಮಾತ್ರವೇ ಸೀಮಿತವಾಗಿರುತ್ತದೆ. ಇದರಿಂದ ಭಾಷಾ ಶ್ರೇಷ್ಠತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿರಂತರ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಸಲಹೆ ನೀಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಸುಭಾಷಿಣಿ ಶ್ರೀವತ್ಸ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.