ಅಟಲ್ ಪಿಂಚಣಿ ಯೋಜನೆ ಸಾಧನೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿ
Wednesday, May 20, 2026
ಮಂಗಳೂರು: ಸರ್ಕಾರಿ ಸ್ವಾಮಿತ್ವದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಅತ್ಯುತ್ತಮ ನೋಂದಣಿ ಸಾಧನೆಗಾಗಿ ನವದೆಹಲಿಯ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ನವದೆಹಲಿಯಲ್ಲಿ ಬುಧವಾರದಂದು ನಡೆದ ಅಟಲ್ ಪಿಂಚಣಿ ವಾರ್ಷಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಮ್. ನಾಗರಾಜು ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ರಾಮನ್ನ ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರಿಕಾಂತ ಎಂ. ಭಂಡಿವಾಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೇಂದ್ರ ಆರ್ಥಿಕ ಇಲಾಖೆ/ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿದ್ದ 1,75,500 ಖಾತೆಗಳ ವಾರ್ಷಿಕ ಗುರಿಗೆ ಪ್ರತಿಯಾಗಿ 2,49,185 ಅಟಲ್ ಪಿಂಚಣಿ ಯೋಜನೆ ಖಾತೆಗಳನ್ನು ತೆರೆಯುವ ಮೂಲಕ 142% ಸಾಧನೆ ದಾಖಲಿಸಿದೆ. ಈ ಮೂಲಕ ಕರ್ನಾಟಕ ಬ್ಯಾಂಕುಗಳಲ್ಲೇ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ನಿರ್ಧಾರದನ್ವಯ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಕರ್ನಾಟಕ ಗ್ರಾಮೀಣ ಬ್ಯಾಂಕ್, ರಾಜ್ಯದಾದ್ಯಂತ 1,750 ಶಾಖೆಗಳ ಜಾಲವನ್ನು ಹೊಂದಿದೆ.
ಬ್ಯಾಂಕು 1,10,974 ಕೋಟಿ ರೂ. ಒಟ್ಟು ವ್ಯವಹಾರವನ್ನು ಹೊಂದಿದ್ದು, ಸುಮಾರು 2 ಕೋಟಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.
ಈ ಗೌರವದ ಕುರಿತು ಸಂತೋಷ ವ್ಯಕ್ತಪಡಿಸಿರುವ ಬ್ಯಾಂಕಿನ ಅಧ್ಯಕ್ಷ ಶ್ರಿಕಾಂತ್ ಎಂ. ಭಂಡಿವಾಡ ಅವರು, ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ೬೦ ವರ್ಷಗಳ ನಂತರ ಖಚಿತ ಪಿಂಚಣಿ ಒದಗಿಸುವ ಮೂಲಕ ಬಲವಾದ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದೆ ಎಂದ ಅವರು ಈ ಯೋಜನೆಯಡಿ ಪ್ರತಿಯೊಬ್ಬ ಅರ್ಹ ವ್ಯಕ್ತಿಯನ್ನೂ ನೋಂದಾಯಿಸಲು ಸಿಬ್ಬಂದಿ ಇನ್ನಷ್ಟು ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಪ್ರಶಂತ ಕುಮಾರ ಗೋಯಲ್, ಪಿಂಚಣಿ ಪ್ರಾಧಿಕಾರದ ಆರ್ಥಿಕ ವಿಭಾಗದ ಮಮತಾ ಶಂಕರ, ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ವರಲು ಪೇರಿ ಮತ್ತಿತರರು ಉಪಸ್ಥಿತರಿದ್ದರು.

