ಮಳೆಗಾಲ ಪ್ರಾರಂಭ: ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿ ಮಾಡದಂತೆ ಸೂಚನೆ
ಮಂಗಳೂರು: ಮಂಗಳೂರು ನಗರದಲ್ಲಿ ಈಗಗಾಲೇ ಮಳೆಯು ಪ್ರಾರಂಭಗೊಂಡಿದ್ದು, ಮುಂದೆ ಕೆಲವೇ ದಿನಗಳಲ್ಲಿ ಮುಂಗಾರು ಮಳೆಗಾಲ ಪ್ರಾರಂಭವಾಗಲಿರುವುದರಿಂದ ಮಣ್ಣು ಕುಸಿತ, ಗುಡ್ಡ ಕುಸಿತ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪ್ರಾಣ ಹಾನಿಯಾಗುವುದನ್ನು ತಡೆಗಟ್ಟಲು ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಯಾವುದೇ ರೀತಿಯ ರಸ್ತೆ ಅಗೆತ, ಗುಡ್ಡ ಅಗೆತ ಹಾಗೂ ಮಣ್ಣು ಅಗೆತದ ಕಾಮಗಾರಿಯನ್ನು ಮಾಡದಂತೆ ಸೂಚಿಸಲಾಗಿದೆ.
ಈ ಅವಧಿಯಲ್ಲಿ ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗಲೇ ಪಾಲಿಕೆಯಿಂದ ಪರವಾನಿಗೆ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದಲ್ಲಿ ಕಾಮಗಾರಿಯ ಸ್ಥಳದಲ್ಲಿ ಅಕ್ಕಪಕ್ಕದ ಆಸ್ತಿಗಳಿಗೆ ಹಾನಿಯಾಗದ ರೀತಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿ ಜರೂರಾಗಿ ಬ್ಯಾಕ್ ಫಿಲ್ಲಿಂಗ್ (Back Filling) ಕಾಮಗಾರಿಯನ್ನು ನಿರ್ವಹಿಸಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯಾವುದಾದರೂ ಅನಾಹುತ ಸಂಭವಿಸಿ ಆಸ್ತಿಪಾಸ್ತಿಗಳಿಗೆ ಹಾನಿ ಅಥವಾ ಪ್ರಾಣ ಹಾನಿಯಾದರೆ ಮಾಲೀಕರು ಹಾಗೂ ಸಂಬಂಧಪಟ್ಟ ಇಂಜಿನಿಯರ್ರವರನ್ನು ನೇರ ಜವಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.