ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ ಔಷಧಿ ಅಂಗಡಿಗಳು
ಮಂಗಳೂರು: ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ವ್ಯಾಪಾರಿಗಳ ಸಂಘ ನೀಡಿರುವ ಕರೆಯ ಮೇರೆಗೆ ಮಂಗಳೂರಿನಲ್ಲಿ ಪ್ರಮುಖ ಔಷಧ ಮಳಿಗೆಗಳು ಬುಧವಾರ ಬಾಗಿಲು ಮುಚ್ಚಿವೆ. ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ನೀಡಿದೆ.
ನಗರದ ಪ್ರಮುಖ ಔಷಧ ಮಳಿಗೆಗಳಾದ ರಾಧಾ ಮೆಡಿಕಲ್ಸ್, ಗಣೇಶ ಮೆಡಿಕಲ್ಸ್, ಸಿಟಿ ಡ್ರಗ್ ಹೌಸ್, ಮೆಡ್ ಕೇರ್ ಮೆಡಿಕಲ್ಸ್ ಸೇರಿದಂತೆ ಹಲವು ಮಳಿಗೆಗಳು ಬಂದ್ ಆಗಿವೆ.
ಮಂಗಳವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12 ರವರೆಗೆ ಔಷಧ ಅಂಗಡಿಗಳನ್ನು ಬಂದ್ ಮಾಡುವಂತೆ ಅಖಿಲ ಭಾರತ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಷನ್ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದವು.
ಅಪೊಲೊ ಫಾರ್ಮಸಿ, ಮೆಡ್ ಪ್ಲಸ್, ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ತೆರೆದಿದ್ದು, ಈ ಔಷಧ ಮಳಿಗೆಗಳನ್ನು ಜನರು ಹುಡುಕಿಕೊಂಡು ಬರುತ್ತಿರುವುದು ಕಂಡುಬಂತು.
ಆನ್‌ಲೈನ್ ಇ ಫಾರ್ಮಸಿ ಮತ್ತು ಕ್ವಿಕ್ ಕಾಮರ್ಸ್ ಆಪ್‌ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ.