ಟ್ಯಾಂಕರ್‌ನಿಂದ ಡೀಸೆಲ್ ಕಳವು
ಮಂಗಳೂರು: ಪಣಂಬೂರು ಸಮೀಪದ ಮೀನಕಳಿಯ ಕೋಡಿಕಲ್ ದ್ವಾರದ ಬಳಿಕ ಟ್ಯಾಂಕರ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಧನಂಜಯ (51) ಮತ್ತು ಕುಶಾಧರ (42) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಹ್ಯಾರೀಸ್ ಎಂ.ವಿ. ಗುರುವಾರ ರಾತ್ರಿ ಪಣಂಬೂರು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಟ್ಯಾಂಕರ್ನಿಂದ ಪ್ಲಾಸ್ಟಿಕ್ ಪೈಪ್ ಮೂಲಕ ಡೀಸೆಲ್ ತೆಗೆದು ಕ್ಯಾನ್ಗಳಲ್ಲಿ ತುಂಬಿಸುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಸ್ಥಳದಲ್ಲಿ ಟ್ಯಾಂಕರಿನಿಂದ ಅನಧಿಕೃತವಾಗಿ ತೆಗೆದು 8 ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 14,000 ರೂ. ಮೌಲ್ಯದ 157 ಲೀ. ಡೀಸೆಲ್ ಪತ್ತೆಯಾಗಿದೆ. ಡೀಸೆಲ್ ತೆಗೆಯಲು ಉಪಯೋಗಿಸಿದ ಪ್ಲಾಸ್ಟಿಕ್ ಪೈಪ್ ಮತ್ತು ಟ್ಯಾಂಕರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಮಾನ ಉದ್ದೇಶದಿಂದ ಅವಶ್ಯಕ ವಸ್ತುಗಳ ಕಾಯ್ದೆಯನ್ನು ಉಲ್ಲಂಘಿಸಿ ಡೀಸೆಲನ್ನು ಕ್ಯಾನ್ಗಳಲ್ಲಿ ತುಂಬಿಸಿ ಮಾರಾಟಕ್ಕೆ ಯತ್ನಿಸಿರುವುದು ಕಂಡು ಬಂದಿದೆ. ಆರೋಪಿ ಧನಂಜಯ ಎಂಆರ್ಪಿಎಲ್ನಿಂದ ಟ್ಯಾಂಕರ್ ತುಂಬಿಸಿಕೊಂಡು ಬಂದು ಮಾಲಕ ಹಾಗೂ ಸಂಸ್ಥೆಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.