ಅಮನಬೆಟ್ಟು-ಬನ್ನಡ್ಕ ರಸ್ತೆ ಕಾಮಗಾರಿ ಪ್ರಾರಂಭ
ಬನ್ನಡ್ಕದಿಂದ ಅಮನಬೆಟ್ಟು ಸಂಪಕ೯ ಕಲ್ಪಿಸುವ ಹೆದ್ದಾರಿಯು ಏರಿಳಿತದಿಂದ ಕೂಡಿರುವುದು ಮತ್ತು ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ನಿರಂತರ ಅಪಘಾತವಾಗಿ ಹಲವು ಮಂದಿ ಮೃತಪಟ್ಟಿದ್ದರು.
ಈ ಹಿನ್ನಲೆಯಲ್ಲಿ ಸ್ಥಳೀಯರ ಬೇಡಿಕೆಯಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೆಲ ದಿನಗಳ ಹಿಂದೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಕಂಪನಿಯ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳೀಯರು ಬನ್ನಡ್ಕ ಪರಿಸರದಲ್ಲಿ ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ ನಿರ್ಮಿಸಬೇಕು.
ಅಮನಬೆಟ್ಟು ರಸ್ತೆಯು ಹೆದ್ದಾರಿಯನ್ನು ಸಂಧಿಸುವಲ್ಲಿ ರಸ್ತೆಯು ತೀರಾ ಕೆಳಮಟ್ಟದಲ್ಲಿದ್ದು ಹೆದ್ದಾರಿ ಪ್ರವೇಶಿಸುವ ವಾಹನಗಳಿಗೆ ಹೆದ್ದಾರಿ ಗೋಚರವಾಗದಿರುವುದರಿಂದ ಅಪಘಾತವಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಸ್ಥಳೀಯರ ಬೇಡಿಕೆಯನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಮೇ 20 ರೊಳಗೆ ಕಾಮಗಾರಿ ನಡೆಸದಿದ್ದರೆ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದ್ದರು.
ಗಡುವು ನೀಡಿದ ಕೊನೆಯ ದಿನವಾದ ಬುಧವಾರ ಕಾಮಗಾರಿ ಪ್ರಾರಂಭಗೊಂಡಿದೆ.