ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ: ಸತತ ಮೂರನೇ ಬಾರಿ ಎನ್‌ಬಿಎ ಮಾನ್ಯತೆ ಪಡೆದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು

ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ: ಸತತ ಮೂರನೇ ಬಾರಿ ಎನ್‌ಬಿಎ ಮಾನ್ಯತೆ ಪಡೆದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು


ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳಿಗೆ ಈ ಹಿಂದೆ ಲಭಿಸಿದ್ದ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಮಾನ್ಯತೆಯನ್ನು ಮುಂದಿನ ಮೂರು ಶೈಕ್ಷಣಿಕ ವರ್ಷಗಳಿಗೆ ವಿಸ್ತರಿಸಲಾಗಿದೆ. ಇದೇ ವೇಳೆ, ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗಕ್ಕೂ ಮೊದಲ ಬಾರಿಗೆ ಮುಂದಿನ ಮೂರು ಶೈಕ್ಷಣಿಕ ವರ್ಷಗಳ ಅವಧಿಗೆ ಎನ್‌ಬಿಎ ಮಾನ್ಯತೆ ದೊರೆತಿದೆ.


ಆಳ್ವಾಸ್ ಸಂಸ್ಥೆಗೆ ಸತತ ಮೂರನೇ ಬಾರಿ ಎನ್‌ಬಿಎ ಮಾನ್ಯತೆ ದೊರೆತಿರುವುದು ಶಿಕ್ಷಣದ ಗುಣಮಟ್ಟ, ಆಧುನಿಕ ಪ್ರಯೋಗಾಲಯ ಸೌಲಭ್ಯ, ಅನುಭವ ಸಂಪನ್ನ ಬೋಧಕ ವೃಂದ ಹಾಗೂ ಕೈಗಾರಿಕಾ ಸಂಪರ್ಕಗಳ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳಿಗೆ 2025ರ ಜುಲೈ 1ರಿಂದ 2028ರ ಡಿಸೆಂಬರ್ 31ರವರೆಗೆ ಮಾನ್ಯತೆ ನೀಡಲಾಗಿದ್ದು, ಇನ್ಫರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗಕ್ಕೆ 2026ರ ಜನವರಿ 1ರಿಂದ 2028ರ ಡಿಸೆಂಬರ್ 31ರವರೆಗೆ ಮಾನ್ಯತೆ ಅನ್ವಯವಾಗಲಿದೆ.

ದೆಹಲಿಯ ಎನ್‌ಬಿಎ ತಜ್ಞರ ತಂಡವು ಕಾಲೇಜಿನ ಇಂಜಿನಿಯರಿಂಗ್ ವಿಭಾಗಗಳ ಮೂಲಸೌಕರ್ಯ, ಬೋಧನೆ ಮತ್ತು ಕಲಿಕೆಯ ವಿಧಾನಗಳು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು, ಪ್ರಕಟಣೆಗಳು, ಉದ್ಯಮಶೀಲ ಅಭಿವೃದ್ಧಿ ಚಟುವಟಿಕೆಗಳು, ವಿವಿಧ ರಾಜ್ಯ ಮತ್ತು ಕೇಂದ್ರ ಹಣಕಾಸು ಸಂಸ್ಥೆಗಳ ಅನುದಾನಗಳು, ವಿವಿಧ ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳೊಂದಿಗಿನ ಒಪ್ಪಂದಗಳನ್ನು ಪರಿಶೀಲಿಸಿ ಮೌಲ್ಯಮಾಪನ ನಡೆಸಿದೆ.

ಎನ್‌ಬಿಎ ಮಾನ್ಯತೆ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಅಳೆಯುವ ಪ್ರಮುಖ ಮಾನದಂಡವಾಗಿದ್ದು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಎನ್‌ಬಿಎ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶದಲ್ಲಿ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಇದರೊಂದಿಗೆ ಶಿಕ್ಷಣದ ಗುಣಮಟ್ಟ, ಪಠ್ಯಕ್ರಮ, ಪ್ರಯೋಗಾಲಯ ಸೌಲಭ್ಯ, ಅಧ್ಯಾಪಕರ ಸಾಮರ್ಥ್ಯ ಹಾಗೂ ಕೈಗಾರಿಕಾ ಸಂಪರ್ಕಗಳನ್ನು ನಿರಂತರವಾಗಿ ಸುಧಾರಿಸಲು ಇದು ಸಹಕಾರಿಯಾಗಿದೆ.

ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಹಾಗೂ ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಅಭಿನಂದನೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article