ಯಕ್ಷಗಾನ ಹವ್ಯಾಸಿ ಭಾಗವತ ಸಂಪಿಗೆ ಮಾಧವ ಆಚಾರ್ ನಿಧನ
Saturday, May 9, 2026
ಮೂಡುಬಿದಿರೆ: ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ನಿವೃತ್ತ ಉದ್ಯೋಗಿ, ಹವ್ಯಾಸಿ ಯಕ್ಷಗಾನ ಭಾಗವತ ಸಂಪಿಗೆ ಮಾಧವ ಆಚಾರ್(60) ಶನಿವಾರ ಬೆಳಗ್ಗೆ ನಿಧನರಾದರು.
ಯಕ್ಷಗಾನ ರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮಾಧವ ಆಚಾರ್, ಮುಂಬೈನ ಗೀತಾಂಬಿಕಾ ಯಕ್ಷಮೇಳದಲ್ಲಿ ನಾಲ್ಕು ವರ್ಷ ಹಾಗೂ ಇರುವೈಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದ್ದರು. ಸುಂಕದಕಟ್ಟೆ ಮತ್ತು ಚೀರುಂಭ ಭಗವತೀ ಮೇಳಗಳಲ್ಲಿ ಬದಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು. ಮೂಡುಬಿದಿರೆ ಪರಿಸರದ ಯಕ್ಷ ಸಂಗಮ, ಯಕ್ಷೋತ್ಥಾನ, ಯಕ್ಷದೇವ ಮಿತ್ರ ಕಲಾ ಮಂಡಳಿ, ಯಕ್ಷಚೈತನ್ಯ, ಆಮ್ನಾಯ ಯಕ್ಷ ಬಳಗ ಹಾಗೂ ಯಕ್ಷೋಪಾಸನಂ ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಭಾಗವತರಾಗಿ ಗುರುತಿಸಿಕೊಂಡಿದ್ದರು.
ಮೂಡುಬಿದಿರೆ ತಾಲೂಕಿನ ಹವ್ಯಾಸಿ ಕಲಾವಿದರ ತಾಳಮದ್ದಳೆ ಕೂಟಗಳಿಗೆ ಇವರೇ ಪ್ರಧಾನ ಭಾಗವತರಾಗಿದ್ದರು. ಬಲಿಪ ಮತ್ತು ಕಡತೋಕಾ ಶೈಲಿಯ ಗಾಯನದಲ್ಲಿ ಪರಿಣತಿ ಹೊಂದಿದ್ದರೂ, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಜನಪ್ರಿಯರಾಗಿದ್ದರು.
ಮೃತರು ಪತ್ನಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.