ಪ್ಲಾಟಿಂಗ್ ಸರಳೀಕರಣಕ್ಕೆ ಅಧಿಕಾರಿಗಳು ತಡೆ-ಲೋಕಾಯುಕ್ತಕ್ಕೆ ದೂರು

ಪ್ಲಾಟಿಂಗ್ ಸರಳೀಕರಣಕ್ಕೆ ಅಧಿಕಾರಿಗಳು ತಡೆ-ಲೋಕಾಯುಕ್ತಕ್ಕೆ ದೂರು

ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ- ತೊಂದರೆ ಮಾಡುವವರಿಗೆ ‘ಮಾರಿಹಬ್ಬ’: ಎಚ್. ಮಹಮ್ಮದ್ ಆಲಿ ಎಚ್ಚರಿಕೆ

ಪುತ್ತೂರು; ಸಾರ್ವಜನಿಕರ ಅನುಕೂಲಕ್ಕಾಗಿ ಪ್ಲಾಟಿಂಗ್ ನಿಯಮವನ್ನು ಸರ್ಕಾರ ಸರಳೀಕರಣಗೊಳಿಸಿದ ಆದೇಶವನ್ನು ಧಿಕ್ಕರಿಸಿರುವ ಭೂ ಮಾಪನಾ ಇಲಾಖೆಯ ಡಿಡಿಎಲ್‌ಆರ್ ಮತ್ತು ಎಡಿಎಲ್‌ಆರ್ ಜನತೆಯಿಂದ ಹಣ ದೋಚುವ ಕಾಯಕಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಇಲಾಖೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಕಾಂಗ್ರೇಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಮಹಮ್ಮದ್ ಆಲಿ ತಿಳಿಸಿದ್ದಾರೆ.  

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರದಿಂದ ಕಳೆದ 10 ವರ್ಷಗಳಿಂದ ಜನರ ಭೂಮಿಯನ್ನು ಪ್ಲಾಟಿಂಗ್ ಆಗದೆ ಸಮಸ್ಯೆಯಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಪ್ಲಾಟಿಂಗ್ ನ್ನು ಸರಳೀಕರಣ ಮಾಡಿ ಆದೇಶ ಮಾಡಿದೆ. ಮಂಗಳೂರಿನಲ್ಲಿ ಮುಖ್ಯಮಂತ್ರಿ ಅವರು ಪ್ರಗತಿಪರಿಶೀಲನೆ ನಡೆಸಿದ ಸಂದರ್ಭ ಡಿಡಿಎಲ್‌ಆರ್ ಪ್ರಸಾದಿನಿ ಅವರು ಜಿಲ್ಲೆಯ ಪ್ಲಾಟಿಂಗ್ ಅಭಿಯಾನದ ಪ್ರಗತಿ ತೋರಿಸುವ ನಿಟ್ಟಿನಲ್ಲಿ 8727 ಕಡತಗಳಲ್ಲಿ ೫೮೫೫ ಕಡತಗಳನ್ನು ಮಂಜೂರುಗೊಳಿಸಿ ಪಹಣಿ ಮಾಡಿದ್ದಾರೆ. ಆದರೆ ನಂತರ ಕಡತ ಮಂಜೂರಾತಿಗೆ ಲಕ್ಷಾಂತರ ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಕಳೆ ಮಾರ್ಚಿನಲ್ಲಿ ಲೋಕಾಯುಕ್ತಕ್ಕೆ ಲಿಖಿತ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.  

ಪ್ಲಾಟಿಂಗ್ ಸರಳೀಕರಣದ ಆದೇಶದಂತೆ ಭೂ ಮಂಜೂರಾತಿ ನಡವಳಿ, ಸಾಗುವಳಿಚೀಟಿ ಮತ್ತು ಚಾಲ್ತಿ ಪಹಣಿ ಗಳನ್ನು ಭೂ ಸುಧಾರಣೆ ಡಿಕ್ಲರೇಶನ್ ಭೂಮಿ ಪ್ರಕರಣಗಳಲ್ಲಿ ನಮೀನೆ-10 ಸಲ್ಲಿಸಬೇಕಾಗುತ್ತದೆ. ಆದರೆ ಪುತ್ತೂರಿನ ಎಡಿಎಲ್‌ಆರ್ ಕಚೇರಿಯಲ್ಲಿ ಈ 3 ದಾಖಲೆಗಳನ್ನು ಹೊರತುಪಡಿಸಿ ಐಸ್ಕೆಚ್ ದಾಖಲೆಯನ್ನೂ ಕೇಳುತ್ತಿದ್ದಾರೆ. ಭೂ ಮಾಪಕರು ಮಾಡಿಕೊಟ್ಟ ಪ್ಲಾಟಿಂಗ್ ಮತ್ತು ಐ ಸ್ಕೆಚ್ ಗೆ ತಾಳೆ ಬರುವುದಿಲ್ಲ ಎಂಬ ಸಬೂಬು ನೀಡಿ ತಹಶೀಲ್ದಾರ್ ಕಚೇರಿಗೆ ಕಡತಗಳನ್ನು ಹಿಂತಿರುಗಿಸುವ ಕೆಲಸವನ್ನು ಇಲ್ಲಿನ ಎಡಿಎಲ್‌ಆರ್ ಶ್ರೀನಿವಾಸಮೂರ್ತಿ ಹಾಗೂ ಸೂಪರ್‌ವೈಸರ್ ಪ್ರಕಾಶ್ ಜನತೆಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಮೂಲಕ ಬರುವ ಕಡತಗಳು ಸರಾಗವಾಗಿ ತಯಾರಾಗುತ್ತಿದೆ. ಈ ಇಬ್ಬರಿಗೂ ಹಲವು ಸಲ ಶಾಸಕ ಅಶೋಕ್ ರೈ ಅವರು ಎಚ್ಚರಿಕೆ ಕೊಟ್ಟಿದ್ದರೂ ಅಧಿಕಾರಿಗಳ ತಮ್ಮ ಚಾಳಿ ಮುಂದುವರಿಸಿದ್ದಾರೆ ಎಂದು ಅವರು ಆರೋಪಿಸಿದರು. 

ತಾ.ಕಚೇರಿಯಲ್ಲಿ ಲಂಚಾವತಾರ

ಪುತ್ತೂರಿನಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದ್ದು, ತಾಲೂಕು ಕಚೇರಿಯ ಸಿಬಂದಿಗಳು ಲಂಚಾವತಾರದಲ್ಲಿ ಮುಳುಗಿದ್ದಾರೆ. ಈ ಹಿಂದೆ ಲೋಕಾಯುಕ್ತ ವಿಷಯನಿರ್ವಾಹಕ ಸುನೀಲ್ ಎಂಬಾತನನ್ನು ಜೈಲಿಗಟ್ಟಿದ್ದರು. ತಹಶೀಲ್ದಾರ್ ಕೂಡಾ ಎಸ್ಕೇಪ್ ಆಗಿದ್ದರು. ಹಾಗಿದ್ದರೂ ಇವರಿಗೆ ಬುದ್ಧಿಬಂದಿಲ್ಲ. ಇಲ್ಲಿನ ಕನ್ವರ್ಷನ್ ಕೇಸ್‌ವರ್ಕರ್ ದಯಾನಂದ ಕಡತ ವಿಲೇವಾರಿಗೆ ದೊಡ್ಡ ಮೊತ್ತದ ಲಂಚ ಕೇಳುತ್ತಿದ್ದಾರೆ ಎಂದು ಆಲಿ ಆರೋಪಿಸಿದ್ದಾರೆ. 

ಮಾರಿಹಬ್ಬ ಮುಂದಿದೆ..

ಪುತ್ತೂರಿನ ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ ಆಗುವುದರಲ್ಲಿ ಯಾವುದೇ ಸಂದೇಹ ಬೇಡ. ಈ ಘಟಕಕ್ಕೆ ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ಉದ್ಯಮಿಯ ಭೂ ಸ್ವಾಧೀನಕ್ಕೆ ನಗರಸಭೆಗೆ ಆದೇಶವಾಗಿದೆ.  ಯಾರು ಏನು ಬೇಕಾದರೂ ಮಾಡಲಿ ಸರ್ಕಾರದ ನಿಯಮದ ವಿರುದ್ಧ ಹೋಗಲು ಯಾರಿಗೂ ಸಾಧ್ಯವಿಲ್ಲ. ಇಲ್ಲಿ ಕಾನೂನು ಬಾಹಿರ ಬಡಾವಣೆ ನಿರ್ಮಾಣಕ್ಕೆ ನನ್ನ ವಿರೋಧ ಇದೆ. ಜನರಿಗೆ ಅನಗತ್ಯವಾಗಿ ತೊಂದರೆ ನೀಡುವ, ರಸ್ತೆಯನ್ನು ಮುಚ್ಚುವ ಹಾಗೂ ಗ್ರಾಹಕರಿಗೆ ಮೋಸ ಮಾಡುವವರಿಗೆ ಮುಂದೆ ಮಾರಿಹಬ್ಬ ಕಾದಿದೆ ಎಂದು ಅವರು ಹೇಳಿದರು. 

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಮಾಜಿ ಕಾರ್ಯದರ್ಶಿಗಳಾದ ರೋಷನ್ ಡಯಾಸ್, ಕಮರುದ್ದೀನ್ ಕೂರ್ನಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article