ಯುವ ಜನಾಂಗ ಸಂಸ್ಕಾರ ಪಡೆದರೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ: ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು
ಅವರು ಮೇ 28ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತಡ್ಕ ಅವರ ಕಲಾಯಾನದ ಸ್ವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ಕಲಾವಿದ ಒಂದೇ ಮೇಳದಲ್ಲಿ ೫೦ಕ್ಕೂ ಹೆಚ್ಚು ವರ್ಷ ವ್ಯವಸಾಯ ಮಾಡುತ್ತಿರುವುದು ಸುಲಭದ ಮಾತಲ್ಲ. ಮೇಳ ಹಾಗೂ ಯಜಮಾನರಿಗೆ ಬದ್ಧರಾಗಿ ನಿಷ್ಠೆಯಿಂದ ಯಕ್ಷ ಕಲಾ ಜೀವನ ನಡೆಸುತ್ತಿರುವ ವಸಂತ ಗೌಡ ಕಾಯರ್ತಡ್ಕ ಅವರ ಕಲಾಯಾನದ ಸ್ವರ್ಣ ಸಂಭ್ರಮ ಔಚಿತ್ಯಪೂರ್ಣ. ಯುವ ಕಲಾವಿದರು ಅವರಿಂದ ಕಲಿಯಬೇಕಾದ ಬಹಳಷ್ಟು ವಿಷಯಗಳಿವೆ. ಮುಂದಿನ ವ್ಯವಸಾಯಿ ಕಲಾವಿದರಿಗೆ ಅವರ ಆದರ್ಶ ಅನುಕರಣೀಯ, ಅನುಸರಣೀಯ. ತೆಂಕುತಿಟ್ಟು ಯಕ್ಷಗಾನಕ್ಕೆ ಎರಡು ಶತಮಾನಗಳ ಸುದೀರ್ಘ ಇತಿಹಾಸವಿದ್ದು, ಧರ್ಮಸ್ಥಳ ಮೇಳ ಹೆಗ್ಗಡೆಯವರ ದೂರದರ್ಶಿತ್ವದಿಂದ ವ್ಯವಸ್ಥಿತ, ಅಚ್ಚುಕಟ್ಟುತನದಿಂದ ಪ್ರವರ್ಧಮಾನಕ್ಕೆ ಬರುತ್ತಿದೆ. ಯಾರ ಬಳಿಯೂ ನಿಷ್ಟೂರವಿಲ್ಲದೆ ಎಲ್ಲರೊಂದಿಗೆ ಬೆರೆತು ಯಾವುದೇ ಪಾತ್ರ ನಿರ್ವಹಣೆ ಮಾಡುವುದರಲ್ಲಿ ವಸಂತ ಗೌಡರ ಮುಂದಿನ ಕಲಾ ಜೀವನ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಸ್ವಾಮೀಜಿ ಶ್ರೀ ಮಠದ ಪರವಾಗಿ ವಸಂತ ಗೌಡ ಕಾಯರ್ತಡ್ಕ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.
ಧರ್ಮಸ್ಥಳ ಮೇಳದ ಯಜಮಾನ ಡಿ. ಹರ್ಷೇನ್ದ್ರಕುಮಾರ್ ಮಾತನಾಡಿ, ಕಲಾವಿದರು ಮೇಳದ ಅಸ್ತಿ. ಕಲಾವಿದರಿಗೆ ಜವಾಬ್ದಾರಿ ಬೇಕು. ಯಕ್ಷಗಾನ ಮೇಳ ಬೆಳೆಸಲು ಕಲಾವಿದರ ಪರಿಶ್ರಮ, ಕೊಡುಗೆ ಅಪಾರ. ವೇಷಗಾರಿಕೆಯಲ್ಲಿ ಸುಧಾರಿಸುವ ಪ್ರವೃತ್ತಿ ಕಡಿಮೆಯಾಗಿದೆ. ವಸಂತ ಗೌಡ ಯಾವ ವೇಷ ಮಾಡಲೂ ಸಿದ್ಧ. ಮೇಳದಲ್ಲಿ ಕಲಾವಿದರನ್ನು ಸುಧಾರಿಸುವುದು ಬಹಳ ಕಷ್ಟದ ಕೆಲಸ. ಯಕ್ಷಗಾನದ ಅಭಿಮಾನಿಯಾಗಿ ಬಹಳಷ್ಟು ಸವಾಲುಗಳನ್ನು ಸ್ವೀಕರಿಸಿ ಎದುರಿಸಿದ್ದೇನೆ. ವಸಂತ ಗೌಡ ಮೇಳದಲ್ಲಿ ಇನ್ನಷ್ಟು ವರ್ಷ ಕಲಾ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಮಾತನಾಡಿ, ಧರ್ಮಸ್ಥಳ ಮೇಳ ಅತ್ಯಂತ ಬಲಿಷ್ಠ, ಶಿಸ್ತುಬದ್ಧ ತಂಡದ ಮೇಳ. ವಸಂತ ಗೌಡ ಮೇಳದ ಪುಂಡುವೇಷಕ್ಕೆ ಕೊರತೆಯಾಗದಂತೆ ನಿಗರ್ವಿಯಾಗಿ, ಉತ್ತಮ ಕಲಾವಿದನಾಗಿ ಯಾವುದೇ ಪಾತ್ರ ನಿರ್ವಹಿಸಬಲ್ಲವರು. ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ. ಕಲಾವಿದರು ಶಿಸ್ತು ರೂಢಿಸಿಕೊಂಡರೆ ಯಕ್ಷಗಾನ ಪ್ರದರ್ಶನ ಉತ್ತಮ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತದೆ ಎಂದು ಹೇಳಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಲಾವಿದ ವಸಂತ ಗೌಡ ಮತ್ತು ಗೀತಾ ದಂಪತಿಯನ್ನು ಧರ್ಮಸ್ಥಳ ಮೇಳ ಹಾಗೂ ಸರ್ವ ಕಲಾವಿದರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.