ಧರ್ಮಸ್ಥಳದ ಬಹುಮುಖಿ ಧಾರ್ಮಿಕ, ಸಾಮಾಜಿಕ ಸೇವೆ ರಾಷ್ಟ್ರಕ್ಕೆ ಆದರ್ಶ ಮಾದರಿಯಾಗಿದೆ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಧರ್ಮಸ್ಥಳದ ಬಹುಮುಖಿ ಧಾರ್ಮಿಕ, ಸಾಮಾಜಿಕ ಸೇವೆ ರಾಷ್ಟ್ರಕ್ಕೆ ಆದರ್ಶ ಮಾದರಿಯಾಗಿದೆ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಧರ್ಮಸ್ಥಳದ ‘ಸಿರಿ’ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನಾ ಸಮಾರಂಭ


ಉಜಿರೆ: ಧರ್ಮ ಮತ್ತು ಪರಂಪರೆಯ ರಕ್ಷಣೆಯೊಂದಿಗೆ ಅನ್ನದಾನ, ವಿದ್ಯಾದಾನ, ಔಷಧಿದಾನ, ಅಭಯದಾನ ಮೊದಲಾದ ಮಾನವೀಯ ಸೇವೆಗಳನ್ನು ಮಾಡುವುದರ ಜೊತೆಗೆ ಸ್ವಚ್ಛತೆ ಕಾಪಾಡುವುದು ಹಾಗೂ ವೈಜ್ಞಾನಿಕವಾದ ಪಾರದರ್ಶಕ ಆಡಳಿತ ವೈಖರಿ ರಾಷ್ಟ್ರಕ್ಕೇ ಮಾದರಿಯಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದರು.                       


ಅವರು ಮೇ.31 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳ ‘ಸಿರಿ’ ಸಂಸ್ಥೆಯ ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕನ್ನು ಉದ್ಘಾಟಿಸಿ ಮಾತನಾಡಿ, ಅವರು ಸಿರಿ ಸಂಸ್ಥೆಯ ಉತ್ಪನ್ನಗಳನ್ನು ವೀಕ್ಷಿಸಿ, ಕೆಟಲಾಗ್ ಅನಾವರಣಗೊಳಿಸಿ ಉದ್ಯಮಕ್ಕೆ ಶುಭ ಕೋರಿದರು.


ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಹೇಮಾವತಿ ವೀ. ಹೆಗ್ಗಡೆ ಅವರ ದೂರದೃಷ್ಟಿ ಹಾಗೂ ನೇತೃತ್ವದಲ್ಲಿ ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆ, ರುಡ್‌ಸೆಟ್ ಸಂಸ್ಥೆ ಮೊದಲಾದ ಯೋಜನೆಗಳು ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯೊಂದಿಗೆ ರಾಷ್ಟ್ರದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ನಾವು ಪ್ರಾರಂಭಿಸಿದಾಗ ಆರಂಭದಲ್ಲಿ ದೀರ್ಘಾವಧಿ ಕೃಷಿ ಮತ್ತು ಅಲ್ಪಾವಧಿ ಕೃಷಿಗೆ ಪ್ರೋತ್ಸಾಹ ನೀಡಿದೆವು. ‘ಸಿರಿ’ ಉದ್ಯೋಗಿಗಳು ಕೇವಲ ಉದ್ಯೋಗಿಗಳಲ್ಲ. ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸುವ ಪರಿವರ್ತನೆಯ ಹರಿಕಾರರು.ಉದ್ಯೋಗಿಗಳು ಗೌರವಯುತ ಜೀವನ, ಕುಟುಂಬದ ಸುಖ, ಮಕ್ಕಳ ಭವಿಷ್ಯ ಸಂಸ್ಥೆಯ ಲಾಭಕ್ಕಿಂತಲೂ ಮುಖ್ಯವಾಗಿದೆ. ಸತ್ಯ, ನಿಷ್ಠೆ, ಶ್ರಮ ಮತ್ತು ಶಿಸ್ತನ್ನು ಎಂದಿಗೂ ಬಿಡಬೇಡಿ. ‘ಸಿರಿ’ಯನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ-ಸಾಮರ್ಥ್ಯ ನಿಮ್ಮಲ್ಲಿದೆ. ‘ಸಿರಿ’ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಮುಂದಿನ ಪೀಳಿಗೆಯ ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಲಿ, ಗ್ರಾಮೀಣ ಪರಿವರ್ತನೆಗೆ ಮಾದರಿಯಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು.


ಗೌರವ ಉಪಸ್ಥಿತರಿದ್ದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಮಾತನಾಡಿ, ಧರ್ಮಸ್ಥಳದ ಯೋಜನೆಗಳು ಗ್ರಾಮೀಣ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ವಿಶೇಷ ಶಕ್ತಿ ನೀಡುತ್ತಿವೆ. ಭಾರತೀಯ ಸಂಸ್ಕೃತಿ, ನಿಸ್ವಾರ್ಥ ಸೇವೆ, ಮಾನವ ಕಲ್ಯಾಣ, ಗ್ರಾಮೀಣ ವಿಕಾಸ ಯೋಜನೆಗಳು ಆದರ್ಶ ಮಾದರಿಯಾಗಿವೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಆರ್ಥಿಕವಿಕಾಸದೊಂದಿಗೆ ಸಮಾಜದ ಉನ್ನತಿ, ದೇಶದ ಸಮೃದ್ಧಿಗಾಗಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಯುವಕ ಯುವತಿಯರಿಗೆ ಉದ್ಯೋಗ ನೀಡಿ ಸಶಕ್ತ ಕೇಂದ್ರವಾಗಿ ‘ಸಿರಿ ಸಂಸ್ಥೆ’ ಬೆಳೆದು ಸ್ವರ್ಣ ಅಧ್ಯಾಯ ಬರೆದು ನವಭಾರತ ನಿರ್ಮಾಣದಲ್ಲಿ ಪ್ರಮುಖ ಸ್ಥಾನ ಪಡೆಯಲಿ ಎಂದು ಶುಭ ಹಾರೈಸಿದರು.


ಡಾ. ಹೇಮಾವತಿ ಹೆಗ್ಗಡೆ, ಸಂಸದ ಕ್ಯಾ. ಬೃಜೇಶ್ ಚೌಟ, ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್  ಉಪಸ್ಥಿತರಿದ್ದರು.


ಸಿರಿ ಸಂಸ್ಥೆ ವತಿಯಿಂದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಸಿರಿ ಸಂಸ್ಥೆಯ ರಾಯಭಾರಿ, ಚಿತ್ರನಟ ರಮೇಶ್ ಅರವಿಂದ, ಡಿ. ಹರ್ಷೇನ್ದ್ರಕುಮಾರ್, ಸುಪ್ರಿಯಾ ಹರ್ಷೇನ್ದ್ರಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶಚಂದ್ರ ಎಸ್., ಉಪನ್ಯಾಸಕರು, ಧರ್ಮಸ್ಥಳ ಸಂಸ್ಥೆಯ ನಿರ್ದೇಶಕರು, ಉದ್ಯೋಗಿಗಳು, ಸಿರಿ ಸಂಸ್ಥೆಯ ಅಭಿಮಾನಿಗಳು, ಮಾರಾಟ ಪ್ರತಿನಿಧಿಗಳು ಭಾಗವಹಿಸಿದ್ದರು.


ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಸ್ವಾಗತಿಸಿ, ಎಸ್‌ಡಿಎಂ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article