ಮಂಚಿ ಕೊಳ್ಳಾಡು ಪ್ರೌಢಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆ ಗಮನಾರ್ಹ: ಮಾಲತಿ
ಮಂಚಿ ಕೊಳ್ಳಾಡು ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಠ್ಯ ಹಾಗೂ ಸಹಪಠ್ಯದ ಸಮತೋಲಿತ ಕಲಿಕೆ ಮಕ್ಕಳ ಸಂಸ್ಕಾರಯುತ ನಡೆಗೆ ತೆರೆದು ಪ್ರಜ್ಞಾವಂತ ಸಮಾಜದ ಅನಾವರಣಕ್ಕೆ ಕಾರಣವಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಾತನಾಡಿ, ಮಂಚಿ ಕೊಲ್ನಾಡು ಪ್ರೌಢಶಾಲೆಯು ಶಾಲಾ ಶೈಕ್ಷಣಿಕ ಹಿತದೃಷ್ಟಿಯಿಂದ ಹಲವಾರು ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದು ಶೈಕ್ಷಣಿಕ ಗುಣಮಟ್ಟ ಹಾಗೂ ಭೌತಿಕ ವ್ಯವಸ್ಥೆಗಳನ್ನು ಈಡೇರಿಸುವಲ್ಲಿ ಶಾಲಾಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪೋಷಕರು ಬರೆಯುವ ಪೆನ್ನು ವಿತರಿಸುವ ಮೂಲಕ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಉಚಿತ ಪಠ್ಯಪುಸ್ತಕವನ್ನು ಹಸ್ತಾಂತರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಹೊಸ ವಿನ್ಯಾಸದ ಕ್ರೀಡಾ ಜರ್ಸಿಯನ್ನು ಪ್ರದರ್ಶಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಶಿಕ್ಷಣ ಸಂಯೋಜಕರಾದ ರಮಾನಂದ ನೂಜಿಪ್ಪಾಡಿ,ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಡಾ. ಗೋಪಾಲ್ ಆಚಾರ್, ಹಿರಿಯ ವಿದ್ಯಾರ್ಥಿ ಸುಲೈಮಾನ್ ಜಿ ಸುರಿಬೈಲು, ಗಣೇಶ್ ಪ್ರಭು ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿದ್ಯಾಶ್ರೀ, ಶಿಕ್ಷಣ ಸಂಯೋಜಕಿ ಸುಧಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ಟೈಲರ್, ಶಾಲಾ ಸ್ಥಳ ದಾನಿಗಳಾದ ನಾರಾಯಣ ಭಟ್ ನೂಜಿಬೈಲು ಉಪಸ್ಥಿತರಿದ್ದರು.
ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ಸುಶೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಭಾಷಾ ಶಿಕ್ಷಕಿ ಶಾಂತ ಎಸ್. ವಂದಿಸಿದರು.