ಕ್ಯಾಂಟೀನ್‌ನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ತಪ್ಪಿದ ಭಾರೀ ದುರಂತ
Tuesday, June 16, 2026
ಬಂಟ್ವಾಳ: ಬಿ.ಸಿ.ರೋಡಿನ ಮಿನಿ ವಿಧಾನಸೌಧದ ನೇರ ಮುಂಭಾಗದಲ್ಲಿರುವ ಪುರಸಭಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತರುವ ಕ್ಯಾಂಟೀನ್‌ವೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಪವಾಡಸದೃಶವಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಬಿ.ಸಿ. ರೋಡಿನ ಹೆಸರಾಂತ ‘ನಾಗರಾಜ್ ಯಾನೆ ನಾಗ’ ಅವರಿಗೆ ಸೇರಿದ ಕ್ಯಾಂಟೀನ್‌ನ ಹಿಂಬದಿಯಲ್ಲಿ ದೋಸೆ ಮಾಡಲೆಂದು ಇರಿಸಲಾಗಿದ್ದ ಅಡುಗೆ ಅನಿಲದಲ್ಲಿ ಸೋರಿಕೆ ಕಂಡು ಬಂದು ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ.
ಈ ಸಂದರ್ಭ ಕೆಲಸದಲ್ಲಿ ನಿರತರಾಗಿದ್ದ ನೌಕರ ವಿಶ್ವನಾಥ ಅವರಿಗೆ ಅನಿಲ ಸೋರಿಕೆಯಿಂದ ತಗುಲಿಗೊಂಡ ಬೆಂಕಿಗೆ ಸಣ್ಣ ಮಟ್ಟಿನ ಗಾಯವಾಗಿದೆ. ಹಾಗೂ ಕ್ಯಾಂಟೀನ್ ನ ಮಾಲಕರ ಸಹೋದರ ಹರೀಶ್ ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಪವಾಡ ಸದೃಶ ಎಂಬಂತೆ ಭಾರೀ ಅನಾಹುತ ತಪ್ಪಿಹೋಗಿದೆ.
ಬೆಳಗ್ಗಿನ ಹೊತ್ತು ಕ್ಯಾಂಟೀನ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿರುತ್ತಾರೆ. ಪಕ್ಕದಲ್ಲೇ ಶ್ರೀ ರಕ್ತೇಶ್ವರಿ ದೇವಸ್ಥಾನ, ಒಂದನೇ ಮಹಡಿಯಲ್ಲಿ ಬೂಡಾ ಕಚೇರಿ, ಸೆಲೂನ್, ಎರಡನೇ ಮಹಡಿಯಲ್ಲಿ ಪ್ರೆಸ್‌ಕ್ಲಬ್, ಕೆಳ ಅಂತಸ್ತಿನಲ್ಲಿ ಅನೇಕ ಅಂಗಡಿಗಳು ಕಾರ್ಯಾಚರಿಸುತ್ತಿದ್ದು, ಈ ಘಟನೆಯಿಂದ ಯಾವುದೇ ಅಪಾಯ ತಟ್ಟಿಲ್ಲ.
ಗ್ಯಾಸ್ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದರಾದರೂ ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

