ಕಾಸರಗೋಡು: ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣದ ಯೋಜನೆ ಚಾಲನೆ
ಜಿಲ್ಲಾ ಪಂಚಾಯತ್ ಸದಸ್ಯ ಜೆ. ಸೋಮಶೇಖರ ಸೇರಿದಂತೆ ಇನ್ನಿತರ ಯುಡಿಎಫ್ ಜನಪ್ರತಿನಿಧಿಗಳು , ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.
ತಿರುವಂತನಂತಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ . ಡಿ ಸತೀಶನ್ ಮಹಿಳಾ ಪ್ರಯಾಣಿಕರೊಬ್ಬರಿ ಗೆ ’ಶೂನ್ಯ ’ ದರದ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ. ಪಿ ಜಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ ೧೧೪ ಬಸ್ಸುಗಳಲ್ಲಿ ಇದರ ಪ್ರಯೋಜನ ಲಭಿಸುತ್ತಿದ್ದು , ಮೊದಲ ಹಂತದಲ್ಲಿ ಕೇವಲ ಕೆಎಸ್‌ಆರ್‌ಟಿಸಿ ಸಾಮಾನ್ಯ ( ಆರ್ಡಿನರಿ) ಬಸ್ಸುಗಳು , ಟೌನ್ - ಟು -ಟೌನ್ ಮತ್ತು ಲಿಮಿಟೆಡ್ ಸ್ಟಾಪ್ ಆರ್ಡಿನರಿ ಬಸ್ಸುಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಫಾಸ್ಟ್ ಪ್ಯಾಸೆಂಜರ್, ಸೂಪರ್ ಫಾಸ್ಟ್ ಅಥವಾ ಎಕ್ಸ್‌ಪ್ರೆಸ್‌ಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ಈ ಯೋಜನೆಯಡಿ ಮಹಿಳೆಯರು, ಮಂಗಳಮುಖಿಯರಿಗೆ ವಯಸ್ಸು ಅಥವಾ ಆದಾಯದ ಮಿತಿ ಇರುವುದಿಲ್ಲ . ಉಚಿತ ಪ್ರಯಾಣಕ್ಕೆ ಮಹಿಳೆಯರು ಯಾವುದೇ ಸ್ಮಾರ್ಟ್ ಕಾರ್ಡ್ ಅಥವಾ ಗುರುತು ಚೀಟಿ ತೋರಿಸುವ ಅಗತ್ಯ ಇಲ್ಲ ಎಂದು ಸಾರಿಗೆ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.
ಶೂನ್ಯ ದರದ ಟಿಕೆಟ್..
ಈ ಯೋಜನೆಯ ಲಾಭ ಪಡೆಯಲು ಮಹಿಳಾ ಪ್ರಯಾಣಿಕರು ನಿರ್ವಾಹಕರಿಂದ ಹಣ ನೀಡದೆ ಕಡ್ಡಾಯವಾಗಿ ’ಶೂನ್ಯ’ ದರದ ಟಿಕೆಟ್ ಪಡೆದುಕೊಳ್ಳಬೇಕು. ಸರಕಾರದ ಆರ್ಥಿಕ ಹೊಣೆಗಾರಿಕೆಯನ್ನು ಲೆಕ್ಕಹಾಕಲು ಈ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಈ ಯೋಜನೆಯಡಿ ಒಂದು ವಿಶೇಷ ಪ್ರಯೋಜನ ಸಿಗಲಿದೆ. ಕೇರಳ ಕೆಎಸ್ಸಾರ್ಟಿಸಿಗೆ ಸೇರಿದ ಬಸ್ಗಳಲ್ಲಿ ಈ ಕೆಳಗಿನ ಅಂತರರಾಜ್ಯ ಮಾರ್ಗಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕಾಸರಗೋಡು ಜಿಲ್ಲೆಯಿಂದ ಮಂಗಳೂರು, ಪುತ್ತೂರು, ಸುಳ್ಯ ಭಾಗಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್ಸುಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಕಾಸರಗೋಡಿನಿಂದ ಮಂಗಳೂರಿಗೆ ಪ್ರತಿದಿನ ಶಿಕ್ಷಣ, ಉದ್ಯೋಗ, ಚಿಕಿತ್ಸಾ ಸೌಲಭ್ಯಕ್ಕಾಗಿ ತೆರಳುವ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರಿಗೆ ಇದರಿಂದ ಆರ್ಥಿಕ ಉಳಿತಾಯದ ಲಾಭ ಸಿಗಲಿದೆ. ಸೌಲಭ್ಯ ಲಭ್ಯವಾಗುವ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ’ ಪ್ರಿಯದರ್ಶಿನಿ’ ಯೋಜನೆಯ ಸ್ಟಿಕ್ಕರ್ ಲಗತ್ತಿಸಲಾಗಿದೆ.
ವಿರೋಧಪಕ್ಷಗಳಿಂದ ಬಹಿಷ್ಕಾರ..
ಫಾಸ್ಟ್ ಫ್ಯಾಸಂಜರ್ ಸೇರಿದಂತೆ ಎಲ್ಲಾ ಕೆ ಎಸ್ಸಾರ್ಟಿಸಿ ಬಸ್ಸುಗಳಲ್ಲೂ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ವಿರೋಧಪಕ್ಷ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು. ಚುನಾವಣಾ ಪ್ರಚಾರ ಸಮಯದಲ್ಲಿ ನೀಡಿದ ಭರವಸೆ ಅಧಿಕಾರಕ್ಕೆ ಬಂದಾಗ ಯುಡಿಎಫ್ ಸರಕಾರ ಪಾಲಿಸಿಲ್ಲ ಎಂದು ಎಲ್‌ಡಿಎಫ್ ಮತ್ತು ಬಿಜೆಪಿ ಆರೋಪಿಸಿದೆ.