ಸಂತ ಫಿಲೋಮಿನಾ ಕಾಲೇಜಿನಲ್ಲಿ ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಂ 2026

ಸಂತ ಫಿಲೋಮಿನಾ ಕಾಲೇಜಿನಲ್ಲಿ ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಂ 2026


ಪುತ್ತೂರು: ಇಲ್ಲಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ‘ಸ್ಟಾಫ್ ಡೆವಲಪ್ಮೆಂಟ್ ಅಂಡ್ ಅಪ್ರೈಸಲ್ ಸೆಲ್’ ವತಿಯಿಂದ ನೂತನ ಉಪನ್ಯಾಸಕರಿಗಾಗಿ ಹಮ್ಮಿಕೊಳ್ಳಲಾದ ಐದು ದಿನಗಳ ‘ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಂ-2026’ರ ಉದ್ಘಾಟನಾ ಸಮಾರಂಭ ಜೂ.15 ರಂದು ಕಾಲೇಜಿನ ಪಿ.ಜಿ. ಸೆನಾರ್ ಹಾಲ್‌ನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ.ಫಾ.ಡಾ. ಜೆ.ಬಿ. ಸಲ್ಡಾನ್ಹಾ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಸಂಸ್ಥೆ ಅಥವಾ ಕಾಲೇಜಿಗೂ ಒಂದು ದೂರದೃಷ್ಟಿ ಮತ್ತು ಧ್ಯೇಯೋದ್ದೇಶ ಇರುತ್ತದೆ. ಮೊದಲು ಆ ದೂರದೃಷ್ಟಿ ಮತ್ತು ಧ್ಯೇಯೋದ್ದೇಶವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಆಗ ಮಾತ್ರ ನೀವು ಅದಕ್ಕೆ ತಕ್ಕಂತೆ ನಿಮ್ಮನ್ನು ತೊಡಗಿಸಿಕೊಳ್ಳಲು  ಸಾಧ್ಯವಾಗುತ್ತದೆ. ಸಂತ ಫಿಲೋಮಿನಾ ಒಂದು ವಿಶಿಷ್ಟವಾದ ಸಂಸ್ಥೆಯಾಗಿದ್ದು, ಇದು ಇತರರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನೀವು ವಿದ್ಯಾರ್ಥಿಗಳಿಗೆ ಮಾದರಿಯಾಗಲಿದ್ದೀರಿ, ಉತ್ತಮ ಸಮತೋಲನವಿರುವ ನೈತಿಕತೆ, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಅರಿವು ನಿಮ್ಮನ್ನು ಒಬ್ಬ ಉತ್ತಮ ಉಪನ್ಯಾಸಕರು ಮತ್ತು ಅತ್ಯುತ್ತಮ ಪ್ರಾಧ್ಯಾಪಕರನ್ನಾಗಿ ಮಾಡುತ್ತದೆ ಎಂದು ಹೇಳಿದರು.


ಕಾಲೇಜಿನ ಭೇಟಿಯ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಪ್ರೊ. ಶೋಭಾ ಜಿ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಕ ವೃತ್ತಿ ಎಂಬುದು ಕೇವಲ ಕೆಲಸವಲ್ಲ, ಅದೊಂದು ಬದ್ಧತೆ ,ನಾವು ನಮ್ಮ ವೃತ್ತಿ ಮತ್ತು ಕಾಲೇಜಿನ ಧ್ಯೇಯೋದ್ದೇಶಗಳಿಗೆ ಸಂಪೂರ್ಣವಾಗಿ ಬದ್ಧರಾಗಿರಬೇಕು. ಇದರೊಂದಿಗೆ, ನಾವು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯ. ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಂಡು ಬಾಂಧವ್ಯ ಬೆಳೆಸಿಕೊಂಡಾಗ ಮಾತ್ರ ಅವರ ಜೀವನದಲ್ಲಿ ಮಾದರಿ ವ್ಯಕ್ತಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.


ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಗೆಜೆಟೆಡ್ ಮ್ಯಾನೇಜರ್ ಅಚಲಾ ವಿ. ಹೆಗ್ಡೆ ಇದ್ದರು.

ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ತಮ್ಮ ಪ್ರೇರಣಾದಾಯಿ ಸಂದೇಶದಲ್ಲಿ, ಹೊಸದಾಗಿ ನೇಮಕಗೊಂಡ ಸಿಬ್ಬಂದಿಯು ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಹಾಗೆಯೇ ಉನ್ನತ ಶಿಕ್ಷಣದಲ್ಲಿ ಇರುವ ಸಮಸ್ಯೆಗಳ ಬಗ್ಗೆಯೂ ತಿಳಿದಿರಬೇಕು. ನಾವು ಯುಜಿಸಿ, ನ್ಯಾಕ್ ಮತ್ತು ಉನ್ನತ ಶಿಕ್ಷಣ ಸಚಿವಾಲಯದ ಬಗ್ಗೆ ಯೋಚಿಸಬೇಕಾಗಿದೆ. ನಾವು ಕಲಿಯುವುದರಿಂದಲೇ ಗಳಿಸುತ್ತೇವೆ ಸಕಾರಾತ್ಮಕವಾಗಿ ಇರುವುದರೊಂದಿಗೆ ಮತ್ತು ಕಠಿಣ ಪರಿಶ್ರಮ ಪಡುವುದರ ಮೂಲಕ ನಾವು ಜೊತೆಯಾಗಿ ಕಾಲೇಜನ್ನು ನಿರ್ಮಿಸೋಣ ಎಂದು ಹೇಳಿದರು.

ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯಾರ್, ನೂತನ ಅಧ್ಯಾಪಕ ವೃಂದದವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಂಕಾಂ ಉಪನ್ಯಾಸಕಿ ಶ್ರೀರಾಗ ಪ್ರಾರ್ಥಿಸಿ, ಸ್ಟಾಫ್ ಡೆವಲಪ್ಮೆಂಟ್ ಅಂಡ್ ಅಪ್ರೈಸಲ್ ಸೆಲ್ ಸಂಯೋಜಕ ಡಾ. ಎಡ್ವಿನ್ ಡಿ’ಸೋಜಾ ಸ್ವಾಗತಿಸಿದರು. ಸಿಬ್ಬಂದಿ ಅಭಿವೃದ್ಧಿ ಮತ್ತು ಮೌಲ್ಯಮಾಪನ ಘಟಕದ ಸದಸ್ಯ ಡಾ. ರಾಧಾಕೃಷ್ಣ ವಂದಿಸಿದರು. ಎಂಸಿಎ ವಿಭಾಗದ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತಿ ವರ್ಷ ಫ್ಯಾಕಲ್ಟಿ ಇಂಡಕ್ಷನ್ ಕಾರ್ಯಕ್ರಮವನ್ನು ಹೊಸದಾಗಿ ನೇಮಕಗೊಂಡ ಅಧ್ಯಾಪಕರಿಗೆ ಸಂಸ್ಥೆಯ ಕಾರ್ಯವಿಧಾನ, ನೀತಿಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪರಿಚಯ ನೀಡಲು ಆಯೋಜಿಸಲಾಗುತ್ತದೆ. ಇದು ಅಧ್ಯಾಪಕರ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಿ, ಬೋಧನೆ ಮತ್ತು ವಿದ್ಯಾರ್ಥಿ ಮಾರ್ಗದರ್ಶನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article