ಕರಾವಳಿ ಮತ್ತು ಮಲೆನಾಡಿನಲ್ಲಿ ಕ್ಷೀಣಿಸಿದ ಮುಂಗಾರು: ಜೂನ್ 20ರ ವರೆಗೆ ಸಾಮಾನ್ಯ ಮಳೆ, ಎಲ್ನಿನೋ ಭೀತಿ
ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಾರುತಗಳು ನಿರೀಕ್ಷಿತ ಮಟ್ಟದಲ್ಲಿ ಚುರುಕಾಗದ ಹಿನ್ನೆಲೆಯಲ್ಲಿ, ಪ್ರಸಕ್ತ ವಾರದಲ್ಲಿ ಸಾಧಾರಣ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.
ಸೋಮವಾರ ದಿನದ ಬಹುತೇಕ ಸಮಯದಲ್ಲಿ ಕರಾವಳಿಯಾದ್ಯಂತ ಪ್ರಖರ ಬಿಸಿಲಿನ ವಾತಾವರಣ ಕಂಡುಬಂದಿದ್ದು, ಉಷ್ಣಾಂಶ ಎಂದಿಗಿಂತ ಕೊಂಚ ಹೆಚ್ಚಾಗಿಯೇ ಇತ್ತು. ಆದರೆ, ಮಧ್ಯಾಹ್ನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಬೆಳ್ತಂಗಡಿ, ಸುಳ್ಯ ಹಾಗೂ ಚಾರ್ಮಾಡಿ ಸುತ್ತಮುತ್ತಲಿನ ಘಟ್ಟ ಪ್ರದೇಶಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಸೋಮವಾರ ಬೆಳಗ್ಗಿನ ವರೆಗೆ ಕಳೆದ 24 ಗಂಟೆಯಲ್ಲಿ ದ.ಕ ಜಿಲ್ಲೆಯಲ್ಲಿ 10.7ಮಿಮಿ ಮಳೆಯಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಕರಾವಳಿ ಬಯಲು ಸೀಮೆಗಿಂತ ಸ್ವಲ್ಪ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಹವಾಮಾನದ ಏರಿಳಿತಗಳನ್ನು ಗಮನಿಸಿದರೆ, ಜೂನ್ 20ರ ತನಕ ಇದೇ ರೀತಿಯ ಮಿಶ್ರ ಹವಾಮಾನ (ಬಿಸಿಲು ಮತ್ತು ಸಾಧಾರಣ ಮಳೆ) ಮುಂದುವರಿಯುವ ಲಕ್ಷಣಗಳು ದಟ್ಟವಾಗಿವೆ.
ನವೆಂಬರ್‌ನಲ್ಲಿ ತೀವ್ರಗೊಳ್ಳಲಿದೆ ಎಲ್ನಿನೋ:
ಈ ವರ್ಷದ ಮುಂಗಾರು ಹಂಗಾಮಿಗೆ ಜಾಗತಿಕ ಹವಾಮಾನ ವಿದ್ಯಮಾನವಾದ ಎಲ್ನಿನೋ ದೊಡ್ಡ ಮಟ್ಟದ ಹಿನ್ನಡೆ ಉಂಟುಮಾಡುವ ಭೀತಿ ಎದುರಾಗಿದೆ. ವರದಿಗಳ ಪ್ರಕಾರ, ಜೂನ್ ತಿಂಗಳ ಕೊನೆಯ ವಾರದಲ್ಲಿ ಎಲ್ನಿನೋ ಪ್ರಕ್ರಿಯೆ ಆರಂಭವಾಗಲಿದ್ದು, ಇದು ಮುಂಗಾರಿನ ತೀವ್ರತೆಯನ್ನು ಮತ್ತಷ್ಟು ಕುಗ್ಗಿಸಲಿದೆ. ಈ ವಿದ್ಯಮಾನವು ಹಂತಹಂತವಾಗಿ ವೃದ್ಧಿಯಾಗಿ, ಮುಂಬರುವ ನವೆಂಬರ್ ತಿಂಗಳ ವೇಳೆಗೆ ಅತ್ಯಂತ ತೀವ್ರ ಸ್ವರೂಪವನ್ನು ಪಡೆಯುವ ಸೂಚನೆಗಳಿವೆ ಎಂದು ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮುಂಗಾರು ಮಾರುತಗಳು ಆರಂಭದಿಂದಲೇ ದುರ್ಬಲವಾಗಿರುವುದರಿಂದ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ.
ಇದರಿಂದಾಗಿ ನದಿ, ಜಲಾನಯನ ಪ್ರದೇಶಗಳು ಮತ್ತು ಅಂತರ್ಜಲ ಮರುಪೂರಣಕ್ಕೆ ಬರುತ್ತಿರುವ ಮಳೆ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮಳೆ ಕೊರತೆಯು ಕೃಷಿ ಚಟುವಟಿಕೆಗಳ ಮೇಲೆಯೂ ನೇರ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.