ಕರಾವಳಿಯಲ್ಲಿ ಜೂನ್ 4ರಿಂದ ಮುಂಗಾರು ಪ್ರವೇಶದ ಮುನ್ಸೂಚನೆ: ಜೂನ್ 8ರಿಂದ ಸುರಿಯಲಿದೆ ಭಾರಿ ಮಳೆ!
ಮಂಗಳೂರು: ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಬಿಸಿಲು ಮತ್ತು ಮೋಡ ಕವಿದ ಮಿಶ್ರ ವಾತಾವರಣವಿದ್ದು, ಕರಾವಳಿ ಜನತೆ ಬಹುಕಾಲದಿಂದ ಕಾಯುತ್ತಿರುವ ಮುಂಗಾರು (ಮಾನ್ಸೂನ್) ಮಳೆಗೆ ದಿನಗಣನೆ ಆರಂಭವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳ ಪ್ರಕಾರ, ಜೂನ್ 2ರಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ದಟ್ಟವಾಗಲಿದ್ದು, ಜೂನ್ 4ರಿಂದ ಮುಂಗಾರು ಮಾರುತಗಳು ಅಧಿಕೃತವಾಗಿ ಪ್ರವೇಶಿಸುವ ಬಲವಾದ ಲಕ್ಷಣಗಳಿವೆ.
ಸುಳ್ಯ, ಸುಬ್ರಹ್ಮಣ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ
ಸೋಮವಾರ ಸಂಜೆಯ ವೇಳೆಗೆ ಕರಾವಳಿಯ ಒಳನಾಡು ಮತ್ತು ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಕಂಡುಬಂದಿದೆ. ಸುಳ್ಯ ಹಾಗೂ ಪ್ರಸಿದ್ಧ ಕ್ಷೇತ್ರ ಸುಬ್ರಹ್ಮಣ್ಯ ಸುತ್ತಮುತ್ತ ಸೋಮವಾರ ಸಂಜೆ ಗುಡುಗು-ಮಿಂಚಿನ ಅಬ್ಬರದೊಂದಿಗೆ ಭಾರಿ ಮಳೆಯಾಗಿದೆ. ಇದರೊಂದಿಗೆ ಕಡಬ, ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರಿನ ಹಲವೆಡೆ ಉತ್ತಮ ಮಳೆಯಾದ ವರದಿಯಾಗಿದೆ. ಇತ್ತ ಮಂಗಳೂರು, ಸುರತ್ಕಲ್ ಮತ್ತು ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆಯವರೆಗೂ ಕೇವಲ ಮೋಡ ಮುಸುಕಿದ ಉಸಿರುಕಟ್ಟುವ ವಾತಾವರಣವಿತ್ತು.
ಮುಂಗಾರು ಪ್ರವೇಶದ ಮುನ್ಸೂಚನೆ-ಪ್ರಮುಖ ಅಲರ್ಟ್
ಪ್ರಸ್ತುತ ಹವಾಮಾನದ ಚಲನವಲನಗಳನ್ನು ಗಮನಿಸಿ ಸಾರ್ವಜನಿಕರು ಮತ್ತು ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ, ಸೋಮವಾರ ತಡರಾತ್ರಿ ಕರಾವಳಿ ತೀರ ಭಾಗಗಳ ಒಂದೆರಡು ಕಡೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಸಂಜೆ ಮತ್ತು ರಾತ್ರಿಯ ಅವಧಿಯಲ್ಲಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಬಹುದು. ಜೂನ್ 4ರಿಂದ ಕರಾವಳಿಯಲ್ಲಿ ಮುಂಗಾರು ಮಾದರಿಯ ಮೋಡಗಳ ಚಲನೆ ಆರಂಭವಾಗಲಿದೆ. ಜೂನ್ 4ರಿಂದ ಮುಂಗಾರು ಪ್ರವೇಶದ ಲಕ್ಷಣಗಳಿದ್ದರೂ, ಜೂನ್ 8ರಿಂದ ಕರಾವಳಿಯುದ್ದಕ್ಕೂ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದೆ.
ಘಟ್ಟ ಪ್ರದೇಶ ಹಾಗೂ ಒಳನಾಡುಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆಗೆ ಸಿಡಿಲು ಮುನ್ನೆಚ್ಚರಿಕೆ ಇರಲಿದ್ದು, ಸಾರ್ವಜನಿಕರು ಗುಡುಗಿನ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ. ಜೂನ್ ಮೊದಲ ವಾರದ ಅಂತ್ಯಕ್ಕೆ ಮಳೆ ಚುರುಕಾಗುವುದರಿಂದ ತಗ್ಗು ಪ್ರದೇಶದ ನಿವಾಸಿಗಳು ಸಜ್ಜಾಗಿರಲು ಹವಾಮಾನ ಇಲಾಖೆ ಸೂಚಿಸಿದೆ.