ಬಿಜೆಪಿಯಿಂದ ‘ವೋಟ್ ಚೋರಿ ಜತೆಗೆ ಸೀಟ್ ಚೋರಿ’: ಐವನ್ ಡಿಸೋಜಾ
ಮನಪಾ ಕಟ್ಟಡಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಭೆಗೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಬಿಜೆಪಿಯ ಸಚಿವರು ಚುನಾವಣಾ ಅಧಿಕಾರಿಗಳ ಜತೆ ಕುಳಿತು ತೀರ್ಮಾನ ನೀಡುವ ಇಂತಹ ವ್ಯವಸ್ಥೆಯಡಿ ಚುನಾವಣೆ ಪ್ರಕ್ರಿಯೆ ಯಾಕಿರಬೇಕು ಎಂಬ ಪ್ರಶ್ನೆ ಎದ್ದಿದೆ. ಜಾರ್ಖಂಡ್ನಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯ ನಾಮಪತ್ರ ಅಸಂಬದ್ಧವಾಗಿದ್ದರೂ ಅವರಿಗೆ ಸರಿಪಡಿಸಲು ಅವಕಾಶ ನೀಡಿರುವಾಗ ಮೀನಾಕ್ಷಿ ನಟರಾಜನ್ಗೆ ಆ ಅವಕಾಶ ನೀಡದೆ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಲಾಗಿದೆ. ಈ ಬಗ್ಗೆ ದೇಶದ ಪ್ರಧಾನಿಯಾಗಲಿ ಅಥವಾ ಬಿಜೆಪಿ ನಾಯಕರಾಗಲಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಲದಲ್ಲಿ 20 ಮಂದಿ ಟಿಎಂಸಿ ಸಂಸದರನ್ನು ರಾಜೀನಾಮೆ ಕೊಡಿಸಲಾಗಿದೆ. ಆಪ್ ಪಕ್ಷದ 9 ಮಂದಿ ರಾಜ್ಯ ಸಭಾ ಸದಸ್ಯರನ್ನು ರಾಜೀನಾಮೆ ಕೊಡಿಸಲಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಪಕ್ಷ ಒಡೆಯುವ ಬಿಜೆಪಿ ಈ ಧೋರಣೆ ವಿರುದ್ಧ ಮೂರು ತಿಂಗಳ ಕಾಲ ದೇಶದಲ್ಲೆಡೆ ಆಂದೋಲನ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಜಿಲ್ಲೆಯಲ್ಲಿಯೂ ಜಿಲ್ಲಾ, ತಾಲೂಕು, ವಾರ್ಡ್ ಮಟ್ಟದಲ್ಲಿ ಈ ಚಳವಳಿ ನಡೆಯಲಿದೆ ಎಂದವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಎಸ್‌ಐಆರ್ಗೆ ಕಾಂಗ್ರೆಸ್ ಕಲ್ಲು ಹಾಕುತ್ತಿದೆ ಎಂಬ ಮಾತು ಸುಳ್ಳು. ರಾಜ್ಯದಲ್ಲಿ ಎಸ್‌ಐಆರ್ಗೆ ರಾಜ್ಯ ಸರಕಾರ ಸಹಕಾರ ನೀಡುತ್ತಿದೆ. ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮೇಲೆ ಕಣ್ಣಿಟ್ಟು ಪಾರದರ್ಶಕತೆಯನ್ನು ಉಳಿಸಬೇಕಾಗಿದೆ. ಆದರೆ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ನಡೆದಿರುವ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 5.2 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಇಂಡಿಯಾ ಟುಡೇ ಪತ್ರಿಕೆ ವರದಿ ಪ್ರಕಾರ ದೇಶದಲ್ಲಿ ಶೇ. 13ರಷ್ಟು ಮತದಾರರು ಪಟ್ಟಿಯಿಂದ ಕೈತಪ್ಪಿದ್ದಾರೆ. ತೆಲಂಗಾಣದಲ್ಲಿ 88 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ತೆಗೆಯಲಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಉತ್ತರಿಸಬೇಕಾಗಿದೆ. ಎಂದು ಐವನ್ ಡಿಸೋಜಾ ಹೇಳಿದರು.
ದ.ಕ. ಜಿಲ್ಲೆಯಲ್ಲಿಯೂ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆದಿದ್ದು, ಎಷ್ಟು ಮಂದಿ ನಕಲಿ ಮತದಾರರಿದ್ದಾರೆ. ಎಷ್ಟು ಮಂದಿಯ ಹೆಸರು ಬಿಟ್ಟು ಹೋಗಿದೆ ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ. ಪಕ್ಷದ ವತಿಯಿಂದ ಈಗಾಗಲೇ ಬಿಎಲ್‌ಒಗಳ ಜತೆ ಬಿಎಲ್‌ಎಗಳು ಸಂಪರ್ಕವಿರಿಸಿಕೊಂಡು ಮ್ಯಾಪಿಂಗ್ನಲ್ಲಿ ಬಿಟ್ಟು ಹೋದವರ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಸಹಕಾರ ನೀಡುತ್ತಿದ್ದಾರೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುಜರಾತ್, ರಾಜಸ್ಥಾನ, ಕೇರಳದ ಬಹಳಷ್ಟು ಮಂದಿ ನೆಲೆಸಿದ್ದಾರೆ. ಅವರ ಹೆಸರು ಅವರ ರಾಜ್ಯದಲ್ಲಿಯೂ ಮತದಾರರ ಪಟ್ಟಿಯಲ್ಲಿದ್ದು, ಇಲ್ಲಿಯೂ ಇದೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಜಿಲ್ಲಾಡಳಿತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಐವನ್ ಡಿಸೋಜಾ ಹೇಳಿದರು.
ಮುಖಂಡರಾದ ನವೀನ್ ಡಿಸೋಜಾ, ಶಾಂತಲಾ ಗಟ್ಟಿ, ನವಾಝ್, ಪ್ರಕಾಶ್ ಸಾಲಿಯನ್, ನಾಗೇಂದ್ರ ಕಂಬಳಿ, ಇಮ್ರಾನ್, ಮನುರಾಜ್, ಆನಂದ ಸೋನ್ಸ್, ಭಾಸ್ಕರ್ ಮೊದಲಾದರಿದ್ದರು.