ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆ ಭ್ರಷ್ಟ ಕಾಂಗ್ರೆಸ್ಸಿಗರಿಗಿಲ್ಲ: ಕಿಶೋರ್ ಕುಮಾರ್ ಪುತ್ತೂರು

ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆ ಭ್ರಷ್ಟ ಕಾಂಗ್ರೆಸ್ಸಿಗರಿಗಿಲ್ಲ: ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಕಳೆದ 100 ವರ್ಷಗಳಿಂದ ನಿಸ್ವಾರ್ಥವಾಗಿ ರಾಷ್ಟ್ರನಿರ್ಮಾಣ ಹಾಗೂ ವ್ಯಕ್ತಿ ನಿರ್ಮಾಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಲೆಕ್ಕಪತ್ರ ಕೇಳಲು ಹೊರಟಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯು ಅಜ್ಞಾನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ. ಇದನ್ನು ಅತ್ಯುಗ್ರವಾಗಿ ಖಂಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮಿತಿಮೀರಿದೆ ಹಾಗೂ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರದ ಈ ದಯನೀಯ ವೈಫಲ್ಯಗಳನ್ನು ಹಾಗೂ ಹಗರಣಗಳನ್ನು ಮುಚ್ಚಿಹಾಕಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್.ಎಸ್.ಎಸ್. ಮೇಲೆ ಗೂಬೆ ಕೂರಿಸುವ ವಿಫಲ ಯತ್ನವನ್ನು ಸಚಿವರು ಮಾಡುತ್ತಿದ್ದಾರೆ. ತಮ್ಮದೇ ಫಾಲೋವರ್ಸ್‌ಗಳನ್ನು ಮೆಚ್ಚಿಸಲು ಮತ್ತು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಪದೇ ಪದೇ ಹೇಳಿದ್ದನ್ನೇ ಹೇಳುವ ಚಾಳಿಯನ್ನು ಅವರು ಮೊದಲು ಬಿಡಬೇಕು. 

ಆರ್.ಎಸ್.ಎಸ್. ಯಾವುದೇ ಅನಧಿಕೃತ ಸಂಘಟನೆಯಲ್ಲ, ಬದಲಾಗಿ ಇದು ಪ್ರತಿ ವರ್ಷವೂ ನಿಯಮಿತವಾಗಿ ಆಡಿಟಿಂಗ್‌ಗೆ ಒಳಪಡುವ ಸಂಸ್ಥೆಯಾಗಿದ್ದು, ಇಲ್ಲಿನ ಪ್ರತಿಯೊಂದು ಪೈಪೈಸೆಯ ಲೆಕ್ಕಾಚಾರವೂ ಅತ್ಯಂತ ಪಾರದರ್ಶಕವಾಗಿದೆ. ಬಾಯಲ್ಲಿ ಮಾತ್ರ ಮಾತನಾಡುವ ಸಚಿವರಿಗೆ ಧೈರ್ಯವಿದ್ದರೆ ಕಾನೂನುಬಾಹಿರವಾಗಿ ಏನಾದರೂ ನಡೆದಿದೆ ಎಂದು ನೇರವಾಗಿ ಕಾನೂನು ಕ್ರಮ ಜರುಗಿಸಬೇಕಿತ್ತು. ಹಾಗೆ ಮಾಡಲು ಯಾವುದೇ ಆಧಾರವಿಲ್ಲ ಮತ್ತು ಅದು ಅವರ ಕೈಯಲ್ಲಿ ಸಾಧ್ಯವೂ ಇಲ್ಲ ಎಂಬ ಸತ್ಯ ಅವರಿಗೇ ಚೆನ್ನಾಗಿ ಗೊತ್ತಿದೆ ಎಂದು ಶಾಸಕರು ಸವಾಲು ಹಾಕಿದ್ದಾರೆ.

ಇತಿಹಾಸ ಪುಟಗಳನ್ನು ಒಮ್ಮೆ ತಿರುವಿ ನೋಡಲಿ, 1948ರಲ್ಲಿ ಜವಾಹರಲಾಲ್ ನೆಹರೂ ಅವರು ಕೂಡ ಆರ್.ಎಸ್.ಎಸ್. ಅನ್ನು ಬ್ಯಾನ್ ಮಾಡಲು ಹಾಗೂ ಸಂಘವನ್ನು ಮುಗಿಸಲು ಎಲ್ಲಾ ರೀತಿಯ ಕುತಂತ್ರದ ಪ್ರಯತ್ನಗಳನ್ನು ಮಾಡಿದ್ದರು. ಆದರೆ, ತಮ್ಮ ಕೊನೆಯ ದಿನಗಳಲ್ಲಿ ಸಂಘದ ನಿಸ್ವಾರ್ಥ ದೇಶಸೇವೆಯ ಶಕ್ತಿಯನ್ನು ಅರಿತು, ಪಶ್ಚಾತ್ತಾಪ ಪಟ್ಟು, ಕೊನೆಗೆ 1963ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಆರ್.ಎಸ್.ಎಸ್. ಸ್ವಯಂಸೇವಕರಿಗೆ ನೆಹರೂ ಅವರೇ ಖುದ್ದಾಗಿ ಅವಕಾಶ ಮಾಡಿಕೊಟ್ಟಿದ್ದರು ಎಂಬ ಕನಿಷ್ಠ ಜ್ಞಾನ ಸಚಿವರಿಗೆ ಇಲ್ಲದಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಸಚಿವರೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳೇ ಸಂಘದ ಶಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿವೆ. ರಾಜ್ಯದಲ್ಲಿ 4,127 ದೈನಂದಿನ ಶಾಖೆಗಳು, 2,194 ಸಮಾಜೋತ್ಸವಗಳು ಹಾಗೂ ಅದರಲ್ಲಿ 19.61 ಲಕ್ಷ ಮಂದಿ ಭಾಗವಹಿಸಿರುವುದು ಆರ್.ಎಸ್.ಎಸ್. ಬಗ್ಗೆ ನಾಡಿನ ಜನತೆಗೆ ಇರುವ ಅಪಾರ ಒಲವು ಮತ್ತು ನಂಬಿಕೆಯನ್ನು ಸಾಬೀತುಪಡಿಸಿದೆ. ರಾಜ್ಯದಲ್ಲಿ ಹಿಂದುತ್ವದ ಶಕ್ತಿ ಹಾಗೂ ಸಂಘಟನೆಯ ವ್ಯಾಪಕತೆ ದಿನೇ ದಿನೇ ವಿಸ್ತಾರವಾಗುತ್ತಿರುವುದನ್ನು ಕಂಡು ಸಚಿವರಿಗೆ ಹಾಗೂ ಕಾಂಗ್ರೆಸ್ಸಿಗರಿಗೆ ನಡುಕ ಶುರುವಾಗಿದೆ. ಇಂದು ಸಮಾಜ ಇಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳನ್ನು ಕೇಳುತ್ತಿಲ್ಲ, ಬದಲಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುತ್ತಿದೆ.

ಕೇವಲ ಅಲ್ಪಸಂಖ್ಯಾತರ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆರ್.ಎಸ್.ಎಸ್. ಅನ್ನು ಟೀಕಿಸುವ ಚಾಳಿಯನ್ನು ಬಿಡಬೇಕು. ಇತಿಹಾಸದಲ್ಲಿ ಆರ್.ಎಸ್.ಎಸ್. ಅನ್ನು ಬ್ಯಾನ್ ಮಾಡಲು ಹೊರಟ ಕಾಂಗ್ರೆಸ್ಸಿಗರೇ ಇಂದು ದೇಶದಲ್ಲಿ ಬ್ಯಾನ್ ಆಗುವ ಪರಿಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು. ಸೂರ್ಯನ ಕಡೆಗೆ ಉಗುಳುವ ವ್ಯರ್ಥ ಪ್ರಯತ್ನ ಬಿಟ್ಟು, ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿರುವ ಗೃಹ ಇಲಾಖೆಯ ಕಾನೂನು ಸುವ್ಯವಸ್ಥೆ ಹಾಗೂ ಜನತೆಯ ಮೂಲಭೂತ ಸೌಕರ್ಯದತ್ತ ಸಚಿವರು ತಕ್ಷಣ ಗಮನ ಹರಿಸಲಿ ಎಂದು ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article